ಸಿಎಂ ಪತ್ರಕ್ಕೆ ಪ್ರಧಾನ ಮಂತ್ರಿ ಕಚೇರಿಯಿಂದ ಗೌರವ ಸಿಗಬೇಕಲ್ಲವೇ?: ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು : ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವ ಕುರಿತ ಮುಖ್ಯಮಂತ್ರಿ ಬರೆದಿರುವ ಪತ್ರಕ್ಕೆ ಪ್ರಧಾನಮಂತ್ರಿ ಕಚೇರಿಯಿಂದ ಗೌರವ ಸಿಗಬೇಕು ಅಲ್ಲವೇ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಶ್ನೆ ಮಾಡಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಪಾಸ್‍ಪೋರ್ಟ್ ರದ್ದು ಸಂಬಂಧ ಕೇಂದ್ರದಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಇನ್ನೆರಡು ದಿನಗಳಲ್ಲಿ ರದ್ದು ಮಾಡುವುದಾಗಿ ಮತ್ತು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ವಿದೇಶಾಂಗ ಸಚಿವರು, ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಆದರೆ, ಸಿಎಂ ಮೇ 1ರಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಆ ಪತ್ರ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಅದು ಅಲ್ಲದೆ, ಮುಖ್ಯಮಂತ್ರಿಯವರ ಪತ್ರ ಪ್ರಧಾನಮಂತ್ರಿಯವರ ಕಚೇರಿಗೆ ಹೋಗುತ್ತದೆ ಎಂದಾದರೆ ಅದಕ್ಕೆ ಗೌರವ ಸಿಗಬೇಕಲ್ಲವೇ?. ಕರ್ನಾಟಕ ಮುಖ್ಯಮಂತ್ರಿ, ಈಗ ಪತ್ರ ಬರೆದಿರುವುದಾಗಿ ವಿದೇಶಾಂಗ ಸಚಿವರು ಹೇಳಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.