ಜಾತ್ಯತೀತ ನಿಲುವಿಗೆ ನಾನು ಬದ್ಧ: ಬಿಜೆಪಿ ಜೊತೆ ಮೈತ್ರಿಗೆ ಜೆಡಿಎಸ್‌ ಶಾಸಕಿ ಕರೆಮ್ಮ ವಿರೋಧ

Update: 2023-09-24 12:39 GMT

ರಾಯಚೂರು: ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿ ಒಕ್ಕೂಟಕ್ಕೆ ಜೆಡಿಎಸ್ ಸೇರ್ಪಡೆಗೊಂಡ ಬೆನ್ನಲ್ಲೇ ಜೆಡಿಎಸ್ ನ ಕೆಲ ಶಾಸಕರು ಮತ್ತು ನಾಯಕರು ತಮ್ಮ ವರಿಷ್ಠರ ನಿಲುವಿನ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಅದರಂತೆ ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿ ಕರೆಮ್ಮ. ಜಿ.ನಾಯಕ ಕೂಡ ಪಕ್ಷದ ವರಿಷ್ಠರ ನಿಲುವಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಕರೆಮ್ಮ. ಜಿ.ನಾಯಕ, ʼʼಕ್ಷೇತ್ರದ ಜನರು ನನಗೆ ಜಾತ್ಯಾತೀತವಾಗಿ ಮತ ಕೊಟ್ಟು ಗೆಲ್ಲಿಸಿದ್ದಾರೆ. ಜಾತ್ಯತೀತ ನಿಲುವಿಗೆ ನಾನು ಬದ್ಧಳಾಗಿದ್ದೇನೆ. ಮೈತ್ರಿ ಬಗ್ಗೆ ದಿಢೀರ್ ಆಗಿ ನಿರ್ಧಾರ ಸರಿಯಾಗುವುದಿಲ್ಲ. ಈ ಬಗ್ಗೆ ಕ್ಷೇತ್ರದ ಜನರ ಅಭಿಪ್ರಾಯವನ್ನು ನಾನು ನಮ್ಮ ವರಿಷ್ಠರಿಗೆ ತಿಳಿಸುತ್ತೇನೆʼʼ ಎಂದು ಹೇಳಿದ್ದಾರೆ.

ʼʼರಾಯಚೂರು ಜೆಡಿಎಸ್‌ ಪಕ್ಷದ ಭದ್ರಕೋಟೆ, ಇಲ್ಲಿ ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮನವಿ ಮಾಡಿದ್ದೇವೆ. ಆ ಕುರಿತು ಜೆಡಿಎಸ್ ವರಿಷ್ಠರು ತೀರ್ಮಾನ ‌ಮಾಡುತ್ತಾರೆ. ನಮಗೆ ಬಿಜೆಪಿ ಜೊತೆ ಹೋಗಿ ಕೆಲಸ ಮಾಡಲು ಆಗಲ್ಲ, ದೇವದುರ್ಗದಲ್ಲಿ ಮೈತ್ರಿಗೆ ನಾನು ಒಪ್ಪಿದ್ರೂ ಕ್ಷೇತ್ರದ ಜನರು ಒಪ್ಪಲ್ಲ. ಹಿಂದಿನ ಎಲ್ಲಾ ಚುನಾವಣೆಯಲ್ಲಿ ಬಿಜೆಪಿಯನ್ನು ದೂರ ಇಟ್ಟಿದ್ದೇವೆ ಈಗಲೂ ಬಿಜೆಪಿ ದೂರನೇ ಇಡುತ್ತವೆ ಎರಡನೇ ಮಾತೇ ಇಲ್ಲ. ಇನ್ನೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಬಗ್ಗೆ ಅಸಮಾಧಾನವಿದೆʼʼ ಎಂದು ಅವರು ಹೇಳಿದ್ದಾರೆ.

ʼʼಬಿಜೆಪಿಯವರು ಕಲ್ಲು ತೂರಾಟ ಮಾಡಿದ್ದಾರೆʼʼ

ʼʼದೇವದುರ್ಗದಲ್ಲಿ ಪಂಚರತ್ನ ಯಾತ್ರೆಯ ವಾಹನದ ಮೇಲೆ ಬಿಜೆಪಿಯವರು ಕಲ್ಲು ತೂರಾಟ ಮಾಡಿದ್ದಾರೆ. ‌ಪಕ್ಷದ ಬ್ಯಾನರ್ ಹರಿದು ಹಾಕಿದ್ದಾರೆ. ನನ್ನ ಪಕ್ಷ ನನಗೆ ಮುಖ್ಯ, ನಮ್ಮ ವರಿಷ್ಠರ ಬಗ್ಗೆ ನಾನು ಮಾತನಾಡಲ್ಲ‌. ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಜೊತೆಗೆ ಯಾವುದೇ ಹೊಂದಾಣಿಕೆ ಮಾಡಲ್ಲʼʼ ಎಂದು ಕರೆಮ್ಮ ಅವರು ಸ್ಪಷ್ಟಪಡಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News