ಕೋಮುವಾದಿಗಳ ವಿರುದ್ಧವೇ ಹೋರಾಟ ಮಾಡಿಕೊಂಡು ಬಂದಿದ್ದೇನೆ; ನನ್ನ ಹೆಣ ಕೂಡ ಬಿಜೆಪಿಗೆ ಹೋಗಲ್ಲ: ಕುಮಾರಸ್ವಾಮಿಗೆ ಸಿಎಂ ತಿರುಗೇಟು
ಮೈಸೂರು: ʼನನ್ನ ರಾಜಕೀಯ ಜೀವನವೇ ಸೆಕ್ಯೂಲರಿಸಂನಿಂದ ಕೂಡಿದೆ. ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲʼ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿರುಗೇಟು ನೀಡಿದರು.
ಆದಿಚುಂಚನಗಿರಿ ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸೋಮವಾರ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮೈಸೂರಿನಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ, ಮಾಧ್ಯಮದವರೊಂದಿಗೆ ಮಾತನಾಡಿದರು.
ಸಿದ್ಧರಾಮಯ್ಯ ಈ ಹಿಂದೆ ಬಿಜೆಪಿಗೆ ಹೋಗಲು ಪ್ರಯತ್ನಿಸಿದ್ದರು ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನನ್ನ ಇಡೀ ರಾಜಕೀಯ ಜೀವನವೇ ಸೆಕ್ಯೂಲರಿಸಂ ನಿಂದ ಕೂಡಿದೆ. ನಾನು ಮೊದಲಿನಿಂದಲೂ ಕೋಮುವಾದಿಗಳ ವಿರುದ್ಧವೇ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಅಂತಹದರಲ್ಲಿ ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಇತ್ತೀಚೆಗೆ ಅಮಿತ್ ಶಾ ಅವರನ್ನು ಭೇಟಿಮಾಡಿದ್ದೆ. ಹಾಗಂತ ಬಿಜೆಪಿಗೆ ಹೋಗುತ್ತೇನೆ ಎಂಬ ಅರ್ಥವೇ? ಸುಮ್ಮನೆ ಕುಮಾರಸ್ವಾಮಿ ಯಾರೊ ಹೇಳಿದನ್ನು ಕೇಳಿಕೊಂಡು ಆರೋಪಮಾಡಿದ್ದಾರೆ. ಇವರು ಕುಟುಂಬ ರಾಜಕಾರಣಕ್ಕಾಗಿ ಬಿಜೆಪಿ ಜೊತೆಗೆ ಮೈತ್ರಿಗೆ ಮುಂದಾಗಿದ್ದಾರೆ ಎಂದು ಕುಟುಕಿದರು.
ರಾಜ್ಯದಲ್ಲಿ ಈಗಾಗಲೇ 62 ತಾಲ್ಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ಇನ್ನೂ 136 ತಾಲ್ಲೂಕುಗಳ ವರದಿ ಕೇಳಿದ್ದೇವರ.ಇದನ್ನೆಲ್ಲಾ ನೋಡಿಕೊಂಡು ಮುಂದಿನ ಸಚಿವ ಸಂಪುಟದಲ್ಲಿ ಘೋಷಣೆ ಮಾಡಲಿದ್ದೇವೆ ಎಂ್ಉ ಹೇಳಿದರು.
ರಾಜ್ಯದ ರೈತರ ಹಿತ ಬಲಿಕೊಟ್ಟು ರಾಜಕಾರಣ ಮಾಡಲ್ಲ:
ನಮಗೆ ರಾಜ್ಯದ ರೈತರ ಹಿತ ಮುಖ್ಯ ಅದನ್ನು ಬಲಿಕೊಟ್ಟು ಎಂದೂ ರಾಜಕಾರಣ ಮಾಡಲ್ಲ, ಸರ್ವಪಕ್ಷದ ಸಭೆಯಲ್ಲಿ ನಿಮ್ಮ ಪರವಾಗಿ ಇರುತ್ತೇವೆ ಎಂದು ಹೇಳಿದ ಬಿಜೆಪಿಯವರು ರಾಜಕಾರಣಕ್ಕಾಗಿ ತಮಿಳುನಾಡಿಗೆ ಹೆಚ್ವು ನೀರು ಬಿಟ್ಟಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ.
ತಮಿಳುನಾಡಿಗೆ ನಿಯಮದ ಪ್ರಕಾರ ಬಿಡಬೇಕಾದಷ್ಟು ನೀರನ್ನು ಬಿಟ್ಟಿಲ್ಲ. ಕಾವೇರಿ ನೀರಾವರಿ ಪ್ರಾಧಿಕಾರ ಹೇಳಿದ್ದರಿಂದ ಸ್ವಲ್ಪ ಮಟ್ಟಿಗೆ ನೀರು ಬಿಡಲಾಗಿದೆ. ಇಷ್ಟೆಲ್ಲಾ ಆರೋಪ ಮಾಡುವ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆಗೆ ಏಕೆ ಅನುಮತಿ ಕೊಡಿಸಲಿಲ್ಲ? ಕಾವೇರಿ ನೀರಿನ ವಿಚಾರವಾಗಿ 25 ಜನ ಸಂಸದರು ಲೋಕಸಭೆಯಲ್ಲಿ ಎಷ್ಟು ದಿನ ಗಲಾಟೆ ಮಾಡಿದ್ದಾರೆ? ರಾಜ್ಯದ ಸಮಸ್ಯೆಗಳ ಕುರಿತು ಸರ್ವಪಕ್ಷ ನಿಯೋಗವನ್ನು ಪ್ರಧಾನಮಂತ್ರಿಗಳ ಬಳಿಗೆ ಕೊಂಡೊಯ್ಯಲು ಪತ್ರ ಬರೆದಿದ್ದೇನೆ ಅದಕ್ಕೆ ಉತ್ತರವೇ ಬಂದಿಲ್ಲ. ಅದರ ಬಗ್ಗೆ ಅವಕಾಶಕೊಡಿಸುವ ಬದಲು ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ದೇಶ ಒಂದು ಚುನಾವಣೆ ಪ್ರಾಕ್ಟಿಕಲ್ ಆಗಿ ಸಾಧ್ಯವೇ ಇಲ್ಲ. ಈಗಾಗಲೇ ಕರ್ನಾಟಕದಲ್ಲಿ ಚುನಾವಣೆಯಾಗಿದೆ. ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ಬರಲಿದೆ. ಕೆಲವೊಂದು ರಾಜ್ಯಗಳಲ್ಲಿ ಅವಧಿ ಮುಗಿದ ಮೇಲೆ ರಾಷ್ಟ್ರಪತಿ ಆಳ್ವಿಕೆ ಬರುತ್ತದೆ. ಆಗ ಹೇಗೆ ಇವರು ಒಂದೇ ಬಾರಿ ಚುನಾವಣೆ ಮಾಡಲು ಸಾಧ್ಯ? ಇದೆಲ್ಲ ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಹೇಳಿದರು.
ಕರ್ನಾಟಕದ ಚುನಾವಣೆಯಲ್ಲಿನ ಕಾಂಗ್ರೆಸ್ ಪಕ್ಷದ ಗೆಲುವು ಕೇಂದ್ರ ಸರ್ಕಾರ ಮೇಲೆ ಪರಿಣಾಮ ಬೀರಿರುವುದು ನಿಜ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಕರ್ನಾಟಕ್ಕೆ ಬಂದು ಮಾಯಾ ಮಂತ್ರ ಮಾಡಿಬಿಡುತ್ತೇನೆ ಎಂದು ರೊಡ್ ಶೋ, ಸಭೆಗಳನ್ನು ಮಾಡಿದರು. ಅವರು ಎಲ್ಲೆಲ್ಲಿ ಬಂದು ಹೋದರೊ ಅಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳು ದೊಡ್ಡ ಅಂತರದಲ್ಲೇ ಗೆದ್ದರು. ಇದರಿಂದ ಮೋದಿ ಆತಂಕಕ್ಕೊಳಗಾಗಿ ಇದೂವರೆಗೂ ವಿರೋಧಪಕ್ಷದ ನಾಯಕನನ್ನು ಮಾಡಿಲ್ಲ. ಮಾಡೋದು ಇಲ್ಲ. ಒಂದು ರೀತಿಯಲ್ಲಿ ಕರ್ನಾಟಕದ ಬಗ್ಗೆ ಅವರಿಗೆ ತಾತ್ಸಾರ ಮನೋಭಾವ ಬಂದಿದೆ ಎಂದು ಲೇವಡಿ ಮಾಡಿದರು.
ಸಂಘರ್ಷವಾದರೂ ಮಹಿಷ ದಸರಾ ಆಚರಣೆಗೆ ಅವಕಾಶ ಕೊಡುವುದಿಲ್ಲ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಗರಂ ಆದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಅವರ ಹೇಳಿಕೆಗೆಲ್ಲಾ ಉತ್ತರ ಕೊಡುವುದಿಲ್ಲ ಎಂದು ಹೇಳಿದರು.