ರಾಜಿನಾಮೆ ಬೆದರಿಕೆ ಒಡ್ಡಿದ ಶಾಸಕ ಬಿ.ಆರ್. ಪಾಟೀಲ್ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ

Update: 2023-11-29 08:10 GMT

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡರು ತಮ್ಮ ವಿರುದ್ಧ ಲೋಕೋಪಯೋಗಿ ಕೆಲಸಗಳಲ್ಲಿ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ ಎಂದು ಆರೋಪಿಸಿದ್ದ ಶಾಸಕ ಬಿ.ಆರ್.ಪಾಟೀಲ್, ಈ ಕುರಿತು ತನಿಖೆ ನಡೆಸಬೇಕು ಎಂದು ಮಂಗಳವಾರ ಆಗ್ರಹಿಸಿದ್ದರು. ಇದರ ಬೆನ್ನಿಗೇ ಬಿ.ಆರ್.ಪಾಟೀಲ್ ಅವರೊಂದಿಗೆ ಮಾತುಕತೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಪರಿಸ್ಥಿತಿಯ ಕುರಿತು ಸ್ಪಷ್ಟನೆ ನೀಡುವಂತೆ ತಮ್ಮ ಬಳಿಗೆ ಆಹ್ವಾನಿಸಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕುರಿತು ಬುಧವಾರ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ನಾನಿಂದು ಬಿ.ಆರ್.ಪಾಟೀಲರೊಂದಿಗೆ ಮಾತನಾಡಿದ್ದೇನೆ. ನಾನು ನಿನ್ನೆಯೇ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆನಾದರೂ, ದುರದೃಷ್ಟವಶಾತ್ ಅದು ಸಾಧ್ಯವಾಗಿರಲಿಲ್ಲ. ಆದರೆ, ಇಂದು ಬೆಳಗ್ಗೆ ಅವರೊಂದಿಗೆ ಮಾತನಾಡಿದ್ದೇನೆ. ನನ್ನನ್ನು ಬಂದು ಭೇಟಿಯಾಗಿ ಎಂದು ಅವರಿಗೆ ಆಹ್ವಾನ ನೀಡಿದ್ದು, ಅವರು ನನ್ನನ್ನು ಭೇಟಿಯಾದ ನಂತರ ಪರಿಸ್ಥಿತಿಯ ಕುರಿತು ಸ್ಪಷ್ಟನೆ ನೀಡಬಹುದಾಗಿದೆ” ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಮಂಗಳವಾರದಂದು ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದ ಬಿ.ಆರ್.ಪಾಟೀಲ್, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಒಂದು ವೇಳೆ ನನ್ನ ವಿರುದ್ಧದ ಆರೋಪಗಳು ಸಾಬೀತಾದರೆ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವೆ ಎಂದೂ ಸವಾಲು ಹಾಕಿದ್ದರು.

ಇದಲ್ಲದೆ, ಕೆಆರ್ಡಿಎಲ್ ಕಾಮಗಾರಿಗಳ ಕುರಿತು ತನಿಖೆ ಪೂರ್ಣಗೊಳ್ಳುವವರೆಗೂ ನಾನು ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದ ನಂತರ ಕಲಬುರ್ಗಿಗೆ ಮರಳಿ, ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಿ.ಆರ್.ಪಾಟೀಲ್, ನನ್ನ ಆತ್ಮಗೌರವಕ್ಕೆ ಧಕ್ಕೆಯಾಗಿರುವುದರಿಂದ ನಾನು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದರು.

ಈ ನಡುವೆ, ಈ ಕಾಮಗಾರಿಗಳ ತನಿಖೆಯನ್ನು ನಡೆಸುವ ಪ್ರಕ್ರಿಯೆಯಲ್ಲಿ ಸರ್ಕಾರವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News