ಕಾಗೋಡು ತಿಮ್ಮಪ್ಪ ಅವರಿಂದಲೇ ನಾನು ಹೋರಾಟ ಕಲಿತೆ: ಸಚಿವ ಮಧು ಬಂಗಾರಪ್ಪ

Update: 2023-09-16 11:48 GMT

ಶಿವಮೊಗ್ಗ: ಕಾಗೋಡು ತಿಮ್ಮಪ್ಪ ಅವರು ಶರಾವತಿ ನೀರಿಗಾಗಿ ಹೋರಾಟ ಆರಂಭಿಸಿದ್ದರು. ಆ ಸಮಯದಲ್ಲಿ ನಮ್ಮ ತಂದೆಯವರಿಗೆ ಅನಾರೋಗ್ಯದ ಸಮಸ್ಯೆ ಇದ್ದುದರಿಂದ ನನ್ನನ್ನು ನಮ್ಮ ತಂದೆ ಹೋರಾಟಕ್ಕೆ ಹೋಗು ಎಂದಿದ್ದರು. ಅವತ್ತು ಆ ಹೋರಾಟದಲ್ಲಿ ಪಾಲ್ಗೊಂಡು ಕಾಗೋಡು ತಿಮ್ಮಪ್ಪ ಅವರಿಂದಲೇ ನಾನು ಹೋರಾಟ ಕಲಿತ್ತಿದ್ದೇನೆ. ಅವರು ಮಾಡಿರುವ ಬಗರಹುಕಂ ಪುಣ್ಯದ ಕೆಲಸ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು.

ಇಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾಗೋಡು ತಿಮ್ಮಪ್ಪ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

2012 ರಲ್ಲಿ ನಾವು ಜೆಡಿಎಸ್ ನಲ್ಲಿದ್ದವು.‌ ನೀರಿಗಾಗಿ ಅವತ್ತು ಪಾದಯಾತ್ರೆ ಘೋಷಣೆ ಮಾಡಿದ್ದೆ. ಕಾಗೋಡು ತಿಮ್ಮಪ್ಪ ಅವರು ಹೋರಾಟ ಮಾಡುತ್ತಿದ್ದರು. ಅವರೇ ನನಗೆ ಹೋರಾಟದ ಬಗ್ಗೆ ‌ಹೇಳಿ ಕೊಟ್ಟಿದ್ದಾರೆ. ‌ನಮ್ಮ ತಂದೆಯವರು ಮುಖ್ಯಮಂತ್ರಿ ಇದ್ದರೂ ಕೂಡ ನಮಗೆ ಹೋರಾಟದ ಬಗ್ಗೆ ಎಲ್ಲ ಗೊತ್ತಿರಲಿಲ್ಲ. ಕಾಗೋಡು ತಿಮ್ಮಪ್ಪ ಅವರಿಂದ ಎಲ್ಲರೂ ಬೈಸಿಕೊಂಡಿದ್ದರು. ನಾನು ಮಾತ್ರ ಅವರಿಂದ ಯಾವತ್ತು ಬೈಸಿಕೊಂಡಿಲ್ಲ. ವಿರೋಧ ಪಕ್ಷ ಮತ್ತು ನಮ್ಮದೇ ಪಕ್ಷಲ್ಲಿದ್ದಾಗಲೂ ಆ ರೀತಿಯ ಘಟನೆ ನಡೆದಿಲ್ಲ. ಆಗ ನಮ್ಮ ಪಾದಯಾತ್ರೆ ರಾಜಕೀಯ ಪ್ರೇರಿತ ಇರಬಹುದು. ಅವರು ಪಾದಯಾತ್ರೆ ಮಾಡಲಿ ಎಂದಿದ್ದರು. ಆ ಘಟನೆ ಇಂದಿಗೂ ನನಗೆ ನೆನಪಿದೆ ಎಂದರು.

ಶರಾವತಿಯಿಂದ ಸಾಗರಕ್ಕೆ ನೀರು ತರುವ ಯೋಜನೆ ಕಾಗೋಡು ತಿಮ್ಮಪ್ಪರಿಂದ ಯಶಸ್ವಿಯಾಗಿದೆ. ಬಗರಹುಕುಂ ಕಾನೂನು ತರುವಲ್ಲಿ ಕಾಗೋಡು ತಿಮ್ಮಪ್ಪ ಅವರ ಪಾತ್ರ ಮಹತ್ವದ್ದಿದೆ. ನಮ್ಮ ತಂದೆ ಬಂಗಾರಪ್ಪ ಮತ್ತು ಕಾಗೋಡು ತಿಪ್ಪಮ್ಮ ಅವರು ಹಗಲು ರಾತ್ರಿಯನ್ನದೇ ಹೋರಾಟ ಮಾಡುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಬಗರಹುಕಂ ಕಾನೂನು ಸಮಿತಿಯ ಅಧ್ಯಕ್ಷರಾಗಿದ್ದ ಅವರಿಗೆ ನಾನು ವಿರೋಧ ಪಕ್ಷದಲ್ಲಿದ್ದುಕೊಂಡು ಸೊರಬ ತಾಲ್ಲೂಕಿಗೂ ಹಕ್ಕು ಪತ್ರ ವಿತರಣೆಗೆ ಮನವಿ ಮಾಡಿದ್ದೆ. 1900 ಜನರಿಗೆ ಅವತ್ತು ಹಕ್ಕು ಪತ್ರ ವಿತರಣೆ ಮಾಡಲಾಯಿತು. ಕಾಗೋಡು ತಿಮ್ಮಪ್ಪ ಅವರು ನನಗೆ ಒಂದು ಮಾತು ಹೇಳಿದ್ದರು. ‌ಸೊರಬದ ಮಣ್ಣಿನ ನೆಲ ನಿನಗೆ ಬಲ ಕೊಟ್ಟಿದೆ. ಅದನ್ನು ಮುಂದುವರೆಸಿಕೊಂಡು ಹೋಗು ಎಂದಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಇಂದಿಗೂ ನಾನು ಶಾಸಕನಾಗಿರಲಿ, ಸಚಿವನಾಗಿದ್ದರೂ ವಾರದಲ್ಲಿ ಮೂರು ಬಾರಿ ಕರೆ ಮಾಡಿರುತ್ತಾರೆ. ನಾನು ಅವರಲ್ಲಿ ಹಲವಾರು ಸಲಹೆಗಳನ್ನು ಪಡೆದಿದ್ದೇನೆ ಎಂದರು.

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದು, ಅವರ ಪರವಾನಗಿ ಪಡೆದು ಈ ಭಾಗದ ಜನರಿಗೆ ಹಕ್ಕುಪತ್ರ ವಿತರಿಸುವ ಕೆಲಸ ಮಾಡಿದ್ದಾರೆ.‌ ಆರು ಸಾವಿರಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರವನ್ನು ವಿತರಣೆ ಮಾಡಲಾಗಿದೆ. ನಾವೆಲ್ಲರೂ ಒಟ್ಟಾಗಿ ಸೇರಿ ಕಾಗೋಡು ತಿಮ್ಮಪ್ಪ ಅವರ ಭೂಹಕ್ಕಿನ ಕನಸನ್ನು ನನಸು ಮಾಡಬೇಕಿದೆ. ಅದನ್ನು ಮಾಡಿದರೆ ಮಾತ್ರ ನಾವು ಅವರಿಗೆ ಅಭಿನಂದನೆ ಸಲ್ಲಿಸಿದ ಹಾಗೇ ಆಗುತ್ತದೆ. ಭೂಹಕ್ಕು ಕೊಡುವುದು ದೇವರ ಕೆಲಸ. ಪುಣ್ಯದ ಕೆಲಸ. ಅದನ್ನು ನಾವು ಎಲ್ಲರೂ ಸೇರಿ ಮಾಡೋಣ.‌ ನಿಮ್ಮ ಸಹಕಾರ ನನಗೆ ಬೇಕು ಎಂದರು.

ನಾನು ಈಗಾಗಲೇ ಆರರಿಂದ ಎಂಟು ಸಭೆ ಮಾಡಿದ್ದೇನೆ. ಕೇಂದ್ರ ಸರ್ಕಾರಕ್ಕೂ ನಾವು ಮನವಿ ಮಾಡಬೇಕಾಗುತ್ತದೆ. ಕಾನೂನುಬದ್ಧವಾಗಿ ಪ್ರಾಮಾಣಿಕವಾದ ಹೋರಾಟ ನಾನು ಮಾಡುತ್ತೇನೆ. ವಿರೋಧ ಪಕ್ಷದ ಸಹಕಾರವೂ ಬಹಳ ಬೇಕಾಗುತ್ತದೆ. ಎಲ್ಲರ ಸಹಕಾರದಿಂದ ಕೆಲಸ ಮಾಡುತ್ತೇನೆ. ದಿ.ದೇವರಾಜು ಅರಸು ಪ್ರಶಸ್ತಿಯನ್ನು ಕಾಗೋಡು ತಿಮ್ಮಪ್ಪ ಅವರು ಪಡೆದಿದ್ದಾರೆ. ಅವರಂತೆಯೇ ನಾವು ಬದುಕುತ್ತೇನೆ ಎಂದರು.

ಸಮಾರಂಭದಲ್ಲಿ ಸಂಸದ ಬಿ ವೈ ರಾಘವೇಂದ್ರ, ಮಾಜಿ ಸಭಾಪಗಳಾದ ಬಿ‌ ಎಲ್ ಶಂಕರ್, ಡಿ‌ ಹೆಚ್ ಶಂಕರ್ ಮೂರ್ತಿ, ಮಾಜಿ ಸಚಿವ ಆರಗ ಜ್ಞಾನೇಂದ್ರ, ಕೆ ಎಸ್ ಈಶ್ವರಪ್ಪ, ಶಾಸಕ ಚನ್ನಬಸಪ್ಪ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಮಾಜಿ ಎಂಎಲ್ಸಿ ಆಯನೂರು ಮಂಜುನಾಥ್ ಮತ್ತಿತರರ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News