ರಾಜಕೀಯ ಉದ್ದೇಶವಿಲ್ಲದೆ ಐಟಿ ದಾಳಿ ನಡೆಯುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2023-10-13 10:19 GMT

ಬೆಂಗಳೂರು: ರಾಜಕೀಯ ಉದ್ದೇಶವಿಲ್ಲದೆ ದೇಶದಲ್ಲಿ ಐಟಿ ದಾಳಿ ನಡೆಯುವುದಿಲ್ಲ. ಕೇವಲ ನಮ್ಮಲ್ಲಿ ಮಾತ್ರ ಅಲ್ಲ ಬೇರೆ ರಾಜ್ಯಗಳಲ್ಲೂ ರಾಜಕೀಯ ಪ್ರೇರಿತ ಐಟಿ ದಾಳಿ ಆಗುತ್ತಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ಹೇಳಿದ್ದಾರೆ.

ಶುಕ್ರವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.

ಪಂಚರಾಜ್ಯಗಳ ಚುನಾವಣೆಗೆ ಕರ್ನಾಟಕದಿಂದ ಹಣ ಕಳಿಸಲಾಗುತ್ತಿದೆ ಎಂಬ ಮಾಜಿ ಸಚಿವ ಅಶ್ವಥ್ ನಾರಾಯಣ ಅವರ ಆರೋಪದ ಬಗ್ಗೆ ಕೇಳಿದಾಗ, "ಹಾದಿ ಬೀದಿಯಲ್ಲಿ ಹೋಗುವವರ ಮಾತಿಗೆ ನಾನು ಉತ್ತರಿಸುವುದಿಲ್ಲ" ಎಂದು ತಿಳಿಸಿದರು.

ಬಿಬಿಎಂಪಿಯಿಂದ ಬಿಡುಗಡೆ ಆದ 650 ಕೋಟಿ ಅನುದಾನದಲ್ಲಿ ಪಡೆದ ಕಮಿಷನ್ ಹಣವನ್ನು ಅಂಬಿಕಾಪತಿ ಮೂಲಕ ಕಳಿಸುತ್ತಿದ್ದರು ಎಂಬ ಆರೋಪದ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ನನಗೆ ಗೊತ್ತಿಲ್ಲ" ಎಂದು ತಿಳಿಸಿದರು.

ಕೆಂಪಣ್ಣ ಆಂತಕ ಪಡಬೇಕಿಲ್ಲ

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು 'ನಮ್ಮ ಪರಿಸ್ಥಿತಿ ರೈತರಿಗಿಂತ ಶೋಚನೀಯವಾಗಿದೆ. ತನಿಖೆ ಪಕ್ಕಕ್ಕಿಟ್ಟು ಬಿಲ್ ಪಾವತಿ ಮಾಡಲಿ' ಎಂದು ಸರ್ಕಾರಕ್ಕೆ ಮನವಿ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ; "ಬಿಲ್ ಪಾವತಿ ವಿಚಾರದಲ್ಲಿ ಕೆಂಪಣ್ಣ ಅವರು ಆತಂಕ ಪಡುವ ಅಗತ್ಯವಿಲ್ಲ. ಏನಾದರೂ ಇದ್ದರೆ ಬಂದು ನಮ್ಮ ಬಳಿ ಮಾತನಾಡಲಿ. ನಾವು ನ್ಯಾಯ ಒದಗಿಸುತ್ತೇವೆ. ಕೆಂಪಣ್ಣ ಅವರ ಮನವಿ ಮೇರೆಗೆ ನಾವು ತನಿಖೆ ಪಕ್ಕಕ್ಕಿಟ್ಟು, ಆದ್ಯತೆ ಮೇರೆಗೆ ಕಾಮಗಾರಿಗಳ 60-70% ಹಣ ಬಿಡುಗಡೆ ಮಾಡಿದ್ದೇವೆ. ಬಿಲ್ ಪಾವತಿ ಸಮಯದಲ್ಲಿ ಜಿಎಸ್ ಟಿ ಕೂಡ ಪಾವತಿ ಮಾಡಬೇಕು ಹೀಗಾಗಿ ತನಿಖೆ ವರದಿ ಬರುವ ಮುನ್ನವೇ ನಾವು ಸುಮಾರು ಮುಕ್ಕಾಲು ಭಾಗ ಹಣ ಬಿಡುಗಡೆ ಮಾಡಿದ್ದೇವೆ" ಎಂದು ತಿಳಿಸಿದರು.

ಕೆಂಪಣ್ಣ ಸಚಿವರ ವಿರುದ್ಧ ಆರೋಪ ಮಾಡುತ್ತಿಲ್ಲ ಕೇವಲ ಅಧಿಕಾರಿಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕೇಳಿದಾಗ, "ಈ ಬಗ್ಗೆ ನಮಗೆ ಮಾಹಿತಿ ಇಲ್ಲ. ಸರಿಯಾದ ತನಿಖೆ ನಡೆಯುವವರೆಗೂ ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ತಿಳಿಸಿದರು.

ಲೋಡ್ ಶೆಡ್ಡಿಂಗ್ ವಿಚಾರವಾಗಿ ಕೇಳಿದಾಗ, "ಈ ವಿಚಾರವಾಗಿ ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ. ನಾವು ಅಧಿಕಾದಲ್ಲಿ ಇದ್ದಾಗ ಎಷ್ಟು ವಿದ್ಯುತ್ ಉತ್ಪಾದನೆ ಹೆಚ್ಚಳ ಮಾಡಿದ್ದೆವು, ಬಿಜೆಪಿ ಅವರ ಅವಧಿಯಲ್ಲಿ ಎಷ್ಟು ವಿದ್ಯುತ್ ಉತ್ಪಾದನೆ ಹೆಚ್ಚಳ ಆಗಿದೆ ಎಂಬ ಮಾಹಿತಿ ನನ್ನ ಬಳಿ ಇದೆ. ಮುಖ್ಯಮಂತ್ರಿಗಳ ಸಭೆ ಬಳಿಕ ನಾನು ಮಾತನಾಡುತ್ತೇನೆ" ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News