ಜೆಡಿಎಸ್ ಪಕ್ಷ ಮೈತ್ರಿಗೆ ಯಾವುದೇ ಧಕ್ಕೆ ತರುವುದಿಲ್ಲ: ಎಚ್.ಡಿ. ದೇವೇಗೌಡ

Update: 2024-09-14 17:08 GMT

ಎಚ್.ಡಿ. ದೇವೇಗೌಡ

ಬೆಂಗಳೂರು: ನಾನು ಮನೆಯಲ್ಲಿ ಇನ್ನೂ ಸುಮ್ಮನೆ ಮಲಗುವುದಿಲ್ಲ. ಪಕ್ಷ ಸಂಘಟನೆ ಹಾಗೂ ಜನಪರ ಹೋರಾಟವನ್ನು ಮುಂದುವರಿಸುತ್ತೇನೆ. ನನ್ನನ್ನು ಮುಗಿಸಲು ಸಾಧ್ಯವಿಲ್ಲ. ಎಲ್ಲವನ್ನೂ ಎದುರಿಸಿ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುಡುಗಿದ್ದಾರೆ.

ಶನಿವಾರ ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ರಾಜ್ಯದ ಎಲ್ಲಾ ಕಡೆಗಳಲ್ಲಿ ಪ್ರವಾಸ ಮಾಡುತ್ತೇನೆ. ಪಕ್ಷದ ಕಚೇರಿಗೂ ಬರುತ್ತೇನೆ. ಎನ್‍ಡಿಎ ಮೈತ್ರಿ ಕೂಟದಲ್ಲಿ ನಾವು ಸೇರಿದ್ದು, ಜೆಡಿಎಸ್ ಪಕ್ಷ ಮೈತ್ರಿಗೆ ಯಾವುದೇ ಧಕ್ಕೆ ತರುವುದಿಲ್ಲ ಎಂದು ಸ್ಪಷ್ಟಣೆ ನೀಡಿದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಹಾಗೂ ಮೈಸೂರಿನಲ್ಲಿ ಪ್ರಧಾನಿ ಮೋದಿ ಜತೆ ಕೂತು ಯಾವ ದೇವೇಗೌಡರು ಹೋರಾಟ ಮಾಡಿದ್ದರೋ ಇದೀಗ ಅದೇ ದೇವೇಗೌಡ ಮತ್ತೆ ಹೋರಾಟಕ್ಕೆ ಅಣಿಯಾಗಿ ನಿಂತಿದ್ದಾರೆ ಎಂದು ಹೇಳಿದರು.

‘ನಾನು 62 ವರ್ಷ ಶಾಸಕ, ವಿಪಕ್ಷ ನಾಯಕ, ಮಂತ್ರಿ, ಮುಖ್ಯಮಂತ್ರಿ, ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ಮೂರು ತಿಂಗಳ ಕಾಲ ಮನೆಯಲ್ಲಿಯೇ ಮಲಗಿಸಿಬಿಟ್ಟರು, ನಾನು ಈ ದೇಶದಲ್ಲಿ ತಲೆಮರೆಸಿಕೊಳ್ಳುವ ರಾಜಕಾರಣಿ ಆಗಿದ್ನಾ? ಎಂದು ದೇವೇಗೌಡ ಪ್ರಶ್ನಿಸಿದರು.

ನಾನು ಇಂದು ಪಕ್ಷದ ಕಚೇರಿಗೆ ಬಂದಿದ್ದೇನೆ. ಕೇಂದ್ರ ಸಚಿವ ಕುಮಾರಸ್ವಾಮಿ ಅವರೂ ಆಗಮಿಸಿದ್ದಾರೆ. ಅವರು ಪ್ರತಿದಿನ ಬರಲು ಆಗುವುದಿಲ್ಲ. ನಿಖಿಲ್ ಕುಮಾರಸ್ವಾಮಿ, ಸುರೇಶ್ ಬಾಬುಗೆ ಜವಾಬ್ದಾರಿ ಕೊಟ್ಟಿದ್ದಾರೆ. ಪ್ರತಿ ಜಿಲ್ಲೆಗೆ ಹೋಗಿ ಸದಸ್ಯತ್ವ ಬಗ್ಗೆ ಅಭಿಯಾನ ಮಾಡ್ತಿದ್ದಾರೆ. ನಾನು ಬೇರೆ ಬೇರೆ ಕಡೆ ಪ್ರವಾಸ ಮಾಡುತ್ತೇನೆ ಎಂದು ದೇವೇಗೌಡ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News