ಊಹಾಪೋಹಗಳ ರಾಜಕೀಯದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ: ಸಚಿವ ಎಚ್.ಕೆ. ಪಾಟೀಲ್

ಸಚಿವ ಎಚ್.ಕೆ.ಪಾಟೀಲ್
ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ, ಒಬ್ಬರು ಅಧಿಕಾರಿದಲ್ಲಿರುವುದು, ಒಬ್ಬರನ್ನು ತೆಗೆದು ಹಾಕಬೇಕು ಎಂದು ಯಾವುದೇ ಸತ್ಯ ಇಲ್ಲದೆ ನಡೆಯುವ ಅನಾವಶ್ಯಕ ಚರ್ಚೆಗಳಲ್ಲಿ ನಾನು ಭಾಗಿಯಾಗುವುದಿಲ್ಲ. ಊಹಾಪೋಹಗಳ ರಾಜಕೀಯದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ‘ಮುಂದಿನ ಚುನಾವಣೆಯೂ ನನ್ನ ನೇತೃತ್ವದಲ್ಲಿಯೇ ನಡೆಯುತ್ತದೆ’ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಇಂತಹ ಮಾತು ಅನಾವಶ್ಯಕ. ಇದರ ಬಗ್ಗೆ ನಾನು ಉತ್ತರಿಸುವುದಿಲ್ಲ ಎಂದು ಪ್ರತಿಕ್ರಿಯೆಗೆ ನಿರಾಕರಿಸಿದರು.
ಬಜೆಟ್ ಕುರಿತು ಪ್ರತಿಕ್ರಿಯಿಸಿದ ಎಚ್.ಕೆ.ಪಾಟೀಲ್, ‘ಈ ಬಾರಿಯ ಬಜೆಟ್ ಮಹತ್ವದ ಬಜೆಟ್ ಆಗಿದೆ. ಈವರೆಗೆ 15 ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯನವರು ಅತ್ಯಂತ ಅಧ್ಯಯನಶೀಲವಾಗಿ, ಚಾಣಾಕ್ಷತನದಿಂದ ಹಾಗೂ ಗಟ್ಟಿ ನಿರ್ಣಯ ತೆಗೆದುಕೊಂಡು ರಾಜ್ಯಕ್ಕೆ ಒಳ್ಳೆಯ ಬಜೆಟ್ ಕೊಡುತ್ತಾರೆಂಬ ವಿಶ್ವಾಸ ನನ್ನಲ್ಲಿದೆ ಎಂದು ತಿಳಿಸಿದರು.
ಸಾಕಷ್ಟು ಕಠಿಣವಾದ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ಕೇಂದ್ರ ಸರಕಾರದವರು ನಮಗೆ ಕೊಡಬೇಕಾದ ಅನುದಾನ ಕೊಡುತ್ತಿಲ್ಲ. ಅವರು ರಾಜ್ಯದ ಅಭಿವೃದ್ಧಿ ಕುಂಠಿತವಾಗಲಿ ಎಂದು ನೋಡುತ್ತಿದ್ದಾರೆ. ನಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳಿಂದ ಬಡವರನ್ನು ಮೇಲೆತ್ತಬೇಕು, ಬಡತನವನ್ನು ನಿರ್ಮೂಲನೆ ಮಾಡಬೇಕು ಎಂದು ರಾಜಕೀಯ ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.