ನನ್ನ ಸೋಲಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಿಡಿದೇಳಬೇಕಾಗುತ್ತದೆ: ಮಾಜಿ ಸಚಿವ ವಿ. ಸೋಮಣ್ಣ

Update: 2024-01-06 13:24 GMT

ಬೆಂಗಳೂರು: ನನ್ನ ಸೋಲಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸಿಡಿದೇಳಬೇಕಾಗುತ್ತದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸೋಮಣ್ಣ, ʼನನ್ನ ಸೋಲಿಗೆ ಯಾರು ಕಾರಣ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಗೊತ್ತಿದೆ. ನನ್ನ ಸೋಲಿಗೆ ಕಾರಣರಾದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.

ಲೋಕಸಭೆ ಚುನಾವಣೆ ಇರುವುದರಿಂದ ಕೆಲ ವಿಚಾರ ಮಾತನಾಡುವುದಿಲ್ಲ. ನಮ್ಮಂತಹವರಿಗೆ ಏನು ಅನಾನುಕೂಲ ಎಂಬ ಮಾಹಿತಿ ಅವರಿಗೆ ಇದೆ. ವಿಜಯೇಂದ್ರ ಇನ್ನೂ ಯುವಕ ಅವರು ಬೆಳೆಯಬೇಕು, ರಾಜ್ಯದಲ್ಲಿ ದೊಡ್ಡ ನಾಯಕರು ಇದ್ದಾರೆ. ಸೋಲಿಗೆ ಕಾರಣರಾದ ಮನೆಹಾಳರನ್ನು ಜೊತೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಸಲಹೆ ನೀಡಿದರು.

ನಮ್ಮಂತಹವರ ಮೇಲೆ ಗಧಾ ಪ್ರಹಾರ ಆದರೆ ಪರಿಣಾಮ ಆಗುತ್ತದೆ. ಎಷ್ಟರ ಮಟ್ಟಿಗೆ ಪರಿಣಾಮ ಆಗುತ್ತದೆ ಎಂದು ಚಿಂತನೆ ಮಾಡಬೇಕು. ವಿಜಯೇಂದ್ರಗೆ ಒಳ್ಳೆಯದಾಗಲಿ. ಹಿಂದಿನದ್ದೇ ನಡೆಸಿಕೊಂಡು ಹೋಗುತ್ತೇನೆ ಎಂಬುದನ್ನು ಬಿಡಬೇಕು ಎಂದು ಅವರು ಹೇಳಿದರು.

ನನ್ನ ಮತ್ತು ವಿಪಕ್ಷ ನಾಯಕ ಆರ್​. ಅಶೋಕ್ ಮಧ್ಯೆ ಯಾವ ಭಿನ್ನಾಭಿಪ್ರಾಯವು ಇಲ್ಲ. ವಿಪಕ್ಷ ನಾಯಕ ಅಶೋಕ್​ ನನ್ನ ಭೇಟಿಗೆ ಪ್ರಯತ್ನ ಮಾಡಿದ್ದರು. ನಾನು ಮತ್ತು ಅಶೋಕ್ ಸ್ನೇಹಿತರು. ಅಶೋಕ್ ಮೊದಲು ಶಾಸಕನಾದಾಗ ನಾನು ಮಂತ್ರಿಯಾಗಿದ್ದೆ. ವಿಪಕ್ಷ ನಾಯಕ ಅಶೋಕ್​ ನನಗಿಂತ 14 ವರ್ಷ ಚಿಕ್ಕವರು. ಅಶೋಕ್ ಮೇಲೆ ನನಗೆ ಪ್ರೀತಿ, ವಿಶ್ವಾಸ ಇದೆ. ನಮ್ಮವರಿಂದಲೇ ನೋವಾದಾಗ ನನ್ನ ಭಾವನೆ ಹೇಳಿಕೊಂಡಿದ್ದೇನೆ. ಸಂಕ್ರಾಂತಿ ಬಳಿಕ ಎಲ್ಲವೂ ಸುಖಾಂತ್ಯವಾಗಬೇಕು ಎಂದು ಹೇಳಿದರು.

ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿ 

ಶುಕ್ರವಾರ ರಾತ್ರಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪದ್ಮನಾಭನಗರದ ನಿವಾಸಕ್ಕೆ ತೆರಳಿದ ವಿ.ಸೋಮಣ್ಣ, ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ತಮಗೆ ಬೆಂಬಲ ನೀಡಬೇಕೆಂದು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಕೋರಿದ್ದಾರೆ ಎಂದು ಎನ್ನಲಾಗಿದೆ.

ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿ.ಸೋಮಣ್ಣ, ‘ದೇವೇಗೌಡರನ್ನ ಭೇಟಿಯಾಗಿದ್ದಕ್ಕೆ ಸಂತೋಷವಾಗಿದೆ. ದೇವೇಗೌಡರ ತಂತ್ರಗಾರಿಕೆ ಕಲಿಯಬೇಕು. ನಾನು ಸೋತ ಬಳಿಕ ನನಗೆ ಕರೆ ಮಾಡಿ ಮಾತಾಡಿದ್ದರು. ಅವರು ನನ್ನ ಗುರುಗಳು. ನಾನು ಅವರ ಶಿಷ್ಯ. 1983ರಲ್ಲಿ ನಾನು ರಾಜಕೀಯ ಬಂದಾಗ ಅವರ ಅನುಯಾಯಿ ಆಗಿದ್ದೆ ಎಂದು ಸ್ಮರಿಸಿದರು.

‘ನನಗೆ ರಾಜಕೀಯ ಗೊತ್ತಾಗಿದ್ದೇ ದೇವೇಗೌಡರಿಂದ. ನಾನು ಹೊಟ್ಟೆಪಾಡಿಗೆ ಬೆಂಗಳೂರಿಗೆ ಬಂದಿದ್ದೆ. 1976-77ರಲ್ಲಿ ಗೌಡರ ಭೇಟಿಯಾಯಿತು. ನಂತರ 30ವರ್ಷಕ್ಕೂ ಹೆಚ್ಚು ಕಾಲ ನಾನು ಅವರ ಶಿಷ್ಯನಾಗಿ ರಾಜಕಾರಣದಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಎಚ್.ಡಿ.ಕುಮಾರಸ್ವಾಮಿ ಮತ್ತು ರೇವಣ್ಣ ಇಬ್ಬರು ನನಗೆ ಸಹೋದರರಂತಿದ್ದಾರೆ ಎಂದು ಸೋಮಣ್ಣ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News