ಬಿಜೆಪಿ ದೇವರ ಹೆಸರಿನಲ್ಲಿ ರಾಜಕೀಯ ಮಾಡಿದರೆ, ನಾವು ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಮತ ಕೇಳುತ್ತೇವೆ: ಸಚಿವ ಕೆ.ಎಚ್.ಮುನಿಯಪ್ಪ

Update: 2024-02-03 12:49 GMT

ಬೆಂಗಳೂರು: ಬಿಜೆಪಿಯವರು ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಆದರೆ, ನಾವು ನಮ್ಮ ಸರಕಾರ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಮೂಲಕ ಮತ ಕೇಳುತ್ತೇವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಶನಿವಾರ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು 25 ವರ್ಷಗಳಿಂದ ರಾಮಕೋಟಿ ಬರೆಯುತ್ತಿದ್ದೇನೆ. ನಾವು ಹಿಂದೂಗಳಲ್ಲವೇ? ಕಾಂಗ್ರೆಸ್ ಕಾರ್ಯಕರ್ತರು ದೇವರ ಪೂಜೆ ಮಾಡುವುದಿಲ್ಲವೇ? ಬಿಜೆಪಿಯವರು ಮಾತ್ರ ಹಿಂದೂಗಳಾ? ಎಂದು ಪ್ರಶ್ನಿಸಿದರು.

ಸ್ವತಂತ್ರ ಭಾರತದಲ್ಲಿ ಯಾವ ರಾಜ್ಯವು ಪಡೆಯದ ಸೌಭಾಗ್ಯಗಳನ್ನು ನಮ್ಮ ಕರ್ನಾಟಕದ ಸುಮಾರು 3 ಕೋಟಿ ಜನರು ಈ ಗ್ಯಾರಂಟಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ಗ್ಯಾರಂಟಿ ಯೋಜನೆಗಳ ಕುರಿತ ಜನರಿಗೆ ಮನವರಿಕೆ ಮಾಡಲು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಧ್ಯಕ್ಷರು ಹಾಗೂ 15 ಜನ ಸದಸ್ಯರನ್ನು ಒಳಗೊಂಡ ಸಮಿತಿಗಳನ್ನು ನೇಮಕ ಮಾಡುತ್ತೇವೆ ಎಂದು ಮುನಿಯಪ್ಪ ಹೇಳಿದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಲಾದ ಎಲ್ಲ ಐದು ಗ್ಯಾರಂಟಿಗಳನ್ನು ನಮ್ಮ ಸರಕಾರವು ಅನುಷ್ಠಾನಗೊಳಿಸಿದೆ. ನಮ್ಮ ಸರಕಾರ ಹಿಂದೆಯೂ ನುಡಿದಂತೆ ನಡೆದಿದೆ ಈಗಲೂ ನಡೆಯುತ್ತಿದೆ. ಗ್ಯಾರಂಟಿಗಳ ಫಲಾನುಭವಿಗಳು ಸುಲಲಿತವಾಗಿ ಎಲ್ಲ ಜನರ ಮನೆ ಬಾಗಿಲಿಗೆ ತಲುಪಿಸಲು ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದ ಸಮಿತಿಗಳನ್ನು ರಚಿಸಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ ಎಂದು ಅವರು ತಿಳಿಸಿದರು.

ವಿಶೇಷವಾಗಿ ಮಹಿಳೆಯರು, ರೈತರು, ಕಡು ಬಡವರು, ಹಿಂದುಳಿದ ವರ್ಗಗಳ ಪರವಾದ ಸರಕಾರ ನಮ್ಮದು. ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಹಾಗೆಯೇ ತಾಲ್ಲೂಕು, ಜಿಲ್ಲಾ ಮಟ್ಟದ ಚುನಾವಣೆಗಳನ್ನು ನಾವು ಗೆಲ್ಲ ಬೇಕಾಗುತ್ತದೆ ತಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬುದುದು ಎಂದು ಮುನಿಯಪ್ಪ ಹೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ತಾಲೂಕಿನಿಂದ ಕನಿಷ್ಠ 25 ಸಾವಿರ ಮತಗಳ ಅಂತರದ ಲೀಡ್ ಅನ್ನು ಕಾಂಗ್ರೆಸ್ ಅಭ್ಯರ್ಥಿಗೆ ಕೊಡಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ ಅವರು, ನಮ್ಮ ಸರಕಾರ ನೀಡಿರುವ ಈ ಪ್ರಮುಖ ಗ್ಯಾರಂಟಿ ಯೋಜನೆಗಳಿಗೆ ಎಲ್ಲ ಜನರಿಗೆ ಮುಟ್ಟಿರುವುದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ನಾವು ಗೆಲ್ಲಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News