ಅದೃಷ್ಟ ನನ್ನ ಕಡೆ ಇದ್ದರೆ ಮುಖ್ಯಮಂತ್ರಿ ಆಗಲು ಬಯಸುತ್ತೇನೆ: ಗೃಹ ಸಚಿವ ಪರಮೇಶ್ವರ್‌

Update: 2023-11-03 13:51 GMT

ಬೆಂಗಳೂರು: ಮಧ್ಯಾವಧಿಯಲ್ಲಿ ಸರ್ಕಾರದ ನಾಯಕತ್ವ ಬದಲಾಗುತ್ತದೆ ಎಂಬ ವದಂತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಲಗಳೆದ ಮರುದಿನವೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು, ಅದೃಷ್ಟ ನನ್ನ ಕಡೆ ಇದ್ದರೆ ಮುಖ್ಯಮಂತ್ರಿ ಆಗಲು ಬಯಸುತ್ತೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಹುದ್ದೆಯ ಕುರಿತು ಮತ್ತೊಂದು ಸುತ್ತಿನ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಸಹಕಾರ ಸಚಿವ ಕೆ.ಎನ್. ರಾಜಣ್ಣ, ಒಂದು ದಿನ ಡಾ. ಜಿ.ಪರಮೇಶ್ವ‌ರ್ ಮುಖ್ಯಮಂತ್ರಿ ಆಗುವುದನ್ನು ನೋಡಲು ನಾನು ಬಯಸುತ್ತೇನೆ ಎಂದು ನೀಡಿದ್ದ ಹೇಳಿಕೆಯ ಕುರಿತು ಅವರು ಪ್ರತಿಕ್ರಿಯಿಸುತ್ತಿದ್ದರು.

ತುಮಕೂರು ಜಿಲ್ಲಾ ಕೇಂದ್ರದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಸಚಿವ ಕೆ.ಎನ್.ರಾಜಣ್ಣ, “ಪರಮೇಶ್ವರ್ ಅವರು ಈಗ ಗೃಹ ಸಚಿವರಾಗಿದ್ದಾರೆ. ಭವಿಷ್ಯದಲ್ಲಿ ಏನು ಬೇಕಾದರೂ ಆಗಬಹುದಾಗಿದೆ. ಅವರಿಗೆ ಉತ್ತಮ ಭವಿಷ್ಯವಿದೆ. ಮುಂದಿನ ದಿನಗಳಲ್ಲಿ ಅವರಿಗೆ ಮುಖ್ಯಮಂತ್ರಿಯಾಗುವ ಅದೃಷ್ಟವಿದೆ ಎಂಬುದು ನನ್ನ ವಿಶ‍್ವಾಸವಾಗಿದೆ. ನಾವು ಆ ಅದೃಷ್ಟಕ್ಕೆ ಪೂರಕವಾಗಿ ಕೆಲಸ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ” ಎಂದು ಹೇಳಿದ್ದರು.

“ತುಮಕೂರು ಜಿಲ್ಲೆಯಿಂದ ಮುಖ್ಯಮಂತ್ರಿ ಹೊಂದುವುದು ಜನರಿಗೆ ಸಂತಸದ ಸಂಗತಿಯಾಗಿದ್ದು, ಒಂದು ವೇಳೆ ಪರಮೇಶ್ವರ ಆ ಪೈಕಿ ಒಬ್ಬರಾದರೆ, ಆಗ ನಾವೆಲ್ಲ ಮುಖ್ಯಮಂತ್ರಿಯಾದಂತೆ ಭಾವಿಸುತ್ತೇವೆ” ಎಂದೂ ಪ್ರತಿಪಾದಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್, “ನಾನು ರಾಜಣ್ಣಗೆ ಆಭಾರಿಯಾಗಿದ್ದೇನೆ. ನಾನೂ ಕೂಡಾ ಆ ಅದೃಷ್ಟ ನಡೆಯಲಿ ಎಂದು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಆದರೆ, ತನಗೆ ಯಾವಾಗ ಪದೋನ್ನತಿ ಆಗಬಹುದು ಎಂಬುದು ತಿಳಿದಿಲ್ಲ ಎಂದು ಹೇಳಿದ ಅವರು, “ನಮ್ಮಲ್ಲಿ ಮುಖ್ಯಮಂತ್ರಿಯಾಗಲು ಹಲವಾರು ಅರ್ಹ ಅಭ್ಯರ್ಥಿಗಳಿದ್ದಾರೆ. ಎಲ್ಲರಿಗೂ ಅವಕಾಶ ದೊರೆಯಲಿ” ಎಂದು ಆಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News