ಕೆಂಪೇಗೌಡರ ಬಗ್ಗೆ ಗೌರವ ಇದ್ದರೆ ರಾಜ್ಯ ಸರಕಾರ ಬೆಂಗಳೂರಿನ ಕೆರೆಗಳನ್ನು ರಕ್ಷಣೆ ಮಾಡಲಿ : ಎಚ್‌ಡಿಕೆ
ಹೊಸದಿಲ್ಲಿ : ನಾಡಪ್ರಭು ಕೆಂಪೇಗೌಡರು ಯಾರ ಸ್ವತ್ತು ಅಲ್ಲ, ಅವರು ಕನ್ನಡದ ಸ್ವತ್ತು. ಕನ್ನಡಿಗರ ಅಸ್ಮಿತೆ. ಆ ಮಹಾಪುರುಷರ ಬಗ್ಗೆ ಕಾಂಗ್ರೆಸ್ ಸರಕಾರಕ್ಕೆ ಗೌರವ ಇದ್ದರೆ ಮೊದಲು ಅವರು ಬೆಂಗಳೂರಿನಲ್ಲಿ ಕಟ್ಟಿಸಿರುವ ಕೆರೆಗಳನ್ನು ರಕ್ಷಣೆ ಮಾಡಲಿ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ಬುಧವಾರ ಹೊಸದಿಲ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ನನ್ನ ಹೆಸರು ಹಾಕಿಲ್ಲ ಎನ್ನುವ ಬಗ್ಗೆ ಬೇಸರ ಇಲ್ಲ. ನಾನು ಇದ್ದಲ್ಲಿಯೇ ನಾಡಪ್ರಭುಗಳನ್ನು ಸ್ಮರಿಸಿ ಗೌರವಿಸುತ್ತೇನೆ ಎಂದರು.
ಕೆಂಪೇಗೌಡರ ಜಯಂತಿಗೆ ನನಗೆ ಆಹ್ವಾನ ಇಲ್ಲ, ಆಹ್ವಾನ ಪತ್ರಿಕೆಯಲ್ಲಿ ಹೆಸರೂ ಹಾಕಿಲ್ಲ ಎಂದು ನೀವು ಕೇಳಿದ್ದೀರಿ ಎನ್ನುವ ಕಾರಣಕ್ಕೆ ನಾನು ಮಾತನಾಡಬೇಕಾಯಿತು. ನನ್ನ ಹೃದಯದಲ್ಲಿ ನಾಡಪ್ರಭುಗಳು ಇದ್ದಾರೆ. ಅವರು ಕಾರ್ಯಕ್ರಮಕ್ಕೆ ಕರೆಯದಿರುವುದಕ್ಕೆ ನನಗೆ ಬೇಸರವಿಲ್ಲ, ನಾನು ಈ ವಿಚಾರಕ್ಕೆ ಮಹತ್ವ ಕೊಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ನಾನು ಯಾವಾಗಲೂ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿ ಎಂದು ಹೇಳುವುದಿಲ್ಲ. ಪ್ರೀತಿಯಿಂದ ಕರೆದರೆ ಹೋಗುತ್ತೇನೆ. ನಾನು ಈಗ ದಿಲ್ಲಿಯಲ್ಲಿ ಸಂಸತ್ ಕಲಾಪದಲ್ಲಿ ಭಾಗಿಯಾಗಿದ್ದೇನೆ. ನಾಳೆಯ ದಿನ ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅವರು ಕರೆದಿದ್ದರೂ ಹೋಗಲು ಆಗುತ್ತಿರಲಿಲ್ಲ ಎಂದು ಅವರು ಸ್ಪಷ್ಟಣೆ ನೀಡಿದರು.
ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆದಾಗಲೂ ಬೆಂಗಳೂರಿಗೆ ಕೊಡುಗೆ ಕೊಟ್ಟಿದ್ದೇನೆ. ಕೆಂಪೇಗೌಡರ ಹಿರಿಮೆಗೆ ಧಕ್ಕೆ ಆಗದ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಕೆಂಪೇಗೌಡರಿಗೆ ಯಾವ ರೀತಿ ಗೌರವ ಸಲ್ಲಿಸಬೇಕೋ ಹಾಗೆ ನಡೆದುಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಕೆಂಪಗೌಡರ ಜಯಂತಿಯನ್ನು ಬೇರೆ ಬೇರೆ ರೀತಿಯಲ್ಲಿ ಜನರು ಆಚರಣೆ ಮಾಡುತ್ತಾರೆ. ಸರಕಾರ ಬೇರೆ ರೀತಿಯಲ್ಲಿ ಆಚರಣೆ ಮಾಡುತ್ತದೆ. ದೇವನಹಳ್ಳಿ ಸೇರಿ ರಾಜ್ಯದ ಅನೇಕ ಭಾಗಗಳಲ್ಲಿ ಮನೆ ಮನೆಯಲ್ಲೂ ನಾಡಪ್ರಭುಗಳ ಭಾವಚಿತ್ರ ಇಟ್ಟು ಪೂಜೆ ಮಾಡಿ ಜಯಂತಿಯನ್ನು ಆಚರಣೆ ಮಾಡುತ್ತಾರೆ. ನಾನು ದಿಲ್ಲಿಯಲ್ಲಿಯೆ ಕೆಂಪೇಗೌಡರನ್ನು ಸ್ಮರಣೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು ನಗರದ ಬಗ್ಗೆ ಇವತ್ತು ವಿಶ್ವದಲ್ಲೇ ಚರ್ಚೆ ಆಗುತ್ತಿದೆ. ಅದಕ್ಕೆ ಕಾರಣ ಕೆಂಪೇಗೌಡರು. ಅವರು ಕಟ್ಟಿರುವ ಕೆರೆಗಳನ್ನು ಈಗಿನ ದಿನಗಳಲ್ಲಿ ಸ್ವಾರ್ಥಕ್ಕೆ ಕೆಲವರು ನುಂಗಿದ್ದಾರೆ. ಈಗಲಾದರೂ ಆ ಕೆರೆಗಳನ್ನು ಕಾಪಾಡುವ ಕೆಲಸವನ್ನು ಸರಕಾರ ಮಾಡಬೇಕಿದೆ. ಮೇಕೆದಾಟು ಕಟ್ಟಬೇಕು, ಕುಡಿಯುವ ನೀರು ತರುತ್ತೇವೆ ಎಂದೆಲ್ಲಾ ಹೇಳುತ್ತಾರೆ. ಆದರೆ, ನಗರದ ಜಲಮೂಲಗಳಾಗಿದ್ದ ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಈಗಲೇ ಕುಡಿಯಲು ನೀರಿಲ್ಲದೆ ಜನರು ಬೆಂಗಳೂರಿನಲ್ಲಿ ಪರದಾಡುವ ಪರಿಸ್ಥಿತಿ ಇದೆ. 15 ವರ್ಷವಾದ ಮೇಲೆ ಬೆಂಗಳೂರಿನ ಸ್ಥಿತಿ ಏನಾಗುತ್ತದೋ ಗೊತ್ತಿಲ್ಲ. ಈ ಸರಕಾರ ನ್ಯಾಯಯುತವಾಗಿ ಕೆಂಪೇಗೌಡರ ಜಯಂತಿ ಆಚರಣೆ ಮಾಡೋದಾದರೆ ಆ ಕೆರೆಗಳನ್ನು ರಕ್ಷಣೆ ಮಾಡುವಂತಹ ಕೆಲಸ ಮಾಡಲಿ. ಮಳೆ ನೀರನ್ನು ಸರಿಯಾಗಿ ಬಳಸಿಕೊಳ್ಳುವತ್ತ ಚಿಂತನೆ ಮಾಡಲಿ. ಇಷ್ಟು ಮಾಡಿದರೆ ನಾನು ಸರಕಾರಕ್ಕೆ ಸಲ್ಯೂಟ್ ಮಾಡುತ್ತೇನೆ ಎಂದು ಕೇಂದ್ರ ಸಚಿವರು ಹೇಳಿದರು. ಈ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು ಜತೆಯಲ್ಲಿ ಇದ್ದರು.
ಚನ್ನಪಟ್ಟಣದಲ್ಲಿ ಎನ್‍ಡಿಎ ಅಭ್ಯರ್ಥಿ ಸ್ಪರ್ಧೆ :
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಗೆ ಜೆಡಿಎಸ್, ಬಿಜೆಪಿ ಅಭ್ಯರ್ಥಿ ಅಂತಲ್ಲ, ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿ ಒಮ್ಮತವಾಗಿ ಸ್ಪರ್ಧೆ ಮಾಡಲಿದ್ದಾರೆ. ಇನ್ನೂ ಸಾಕಷ್ಟು ಸಮಯ ಇದೆ. ನಾವು ನಿರ್ಧಾರ ಮಾಡುತ್ತೇವೆ. ಮೈತ್ರಿ ಅಭ್ಯರ್ಥಿ ಅಲ್ಲಿ ಸ್ಪರ್ಧೆ ಮಾಡುತ್ತಾರೆ. ಬಿಜೆಪಿ -ಜೆಡಿಎಸ್ ಎನ್ನುವ ವಿಚಾರ ಅಲ್ಲಿ ಬರೋದೇ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.