ಕನ್ನಡಿಗರಿಗಾದ ಅನ್ಯಾಯವನ್ನು ಪ್ರಶ್ನಿಸಿದಕ್ಕೆ ದೇಶದ್ರೋಹಿ ಪಟ್ಟ: ಸಂಸದ ಡಿ.ಕೆ.ಸುರೇಶ್

Update: 2024-02-03 12:32 GMT

ಬೆಂಗಳೂರು: ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯ ಮರೆಮಾಚಲು ಬಿಜೆಪಿಯ ಡೋಂಗಿ ಹಿಂದುತ್ವವಾದಿಗಳು ನನ್ನ ಹೇಳಿಕೆಯನ್ನು ತಿರುಚಿ ಮಾತನಾಡುತ್ತಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಬನ್ನೇರುಘಟ್ಟದ ಕಾವೇರಿ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಕೇಂದ್ರದ ಬಜೆಟ್‍ನಿಂದ ಆಗಿರುವ ಅನ್ಯಾಯ ಕುರಿತು ನೀಡಿದ್ದ ನನ್ನ ಹೇಳಿಕೆಯನ್ನು ಬಿಜೆಪಿ ನಾಯಕರು ತಿರುಚಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ. ನಾನು ನನ್ನ ರಾಜ್ಯದ ಜನರ ಹಿತ, ಕನ್ನಡಿಗರ ಗೌರವಕ್ಕಾಗಿ ಎಂದಿಗೂ ಹಿಂದೆ ಸರಿಯುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನನ್ನ ಹೇಳಿಕೆಯನ್ನು ತಿರುಚಿ ನಾನು ದೇಶದ ವಿಭಜನೆಯ ಹೇಳಿಕೆ ನೀಡಿದ್ದೇನೆಂದು ಬಿಜೆಪಿ ನಾಯಕರು ಬೊಬ್ಬೆ ಹಾಕುತ್ತಿದ್ದಾರೆ. ಅವರೆಲ್ಲರಿಗೂ ಒಳ್ಳೆಯದಾಗಲಿ, ನನ್ನನ್ನು ನಾಯಕನನ್ನಾಗಿ ಬಿಂಬಿಸುತ್ತಿದ್ದಾರೆ. ನಾನು ಕನ್ನಡಕ್ಕಾಗಿ, ಕರ್ನಾಟಕದ ಹಿತಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧನಿದ್ದೇನೆ’ ಎಂದು ಸುರೇಶ್ ತಿಳಿಸಿದರು.

 ಅನ್ಯಾಯ ಪ್ರಶ್ನಿಸಿದರೆ ದೇಶದ್ರೋಹದ ಹಣೆಪಟ್ಟಿ

ಯಾವ ಪೊಲೀಸ್ ಠಾಣೆಗಾದರೂ ದೂರು ಕೊಡಲಿ, ಯಾವ ಕೋರ್ಟಿನಲ್ಲಾದರೂ ದೂರು ನೀಡಲಿ, ಆ ಕೇಸನ್ನು ಎದುರಿಸಲಿಕ್ಕೆ ಜನರ ಆಶೀರ್ವಾದದಿಂದ ಸಿದ್ಧನಿದ್ದೇನೆ. ತೆರಿಗೆಯ ಲೆಕ್ಕ ಕೊಡಿ ಎಂದು ಕೇಳಿದರೆ ದೇಶದ್ರೋಹಿ ಆಗ್ತೀನಾ?, ಉಳಿದ ವಿಚಾರಗಳನ್ನು ನಾನು ಚರ್ಚಿಸಲು ಹೋಗಲ್ಲ, ಕನ್ನಡಿಗರಿಗಾದ ಅನ್ಯಾಯ ಪ್ರಶ್ನಿಸಿದರೆ ದೇಶದ್ರೋಹದ ಹಣೆಪಟ್ಟಿಯನ್ನು ಬಿಜೆಪಿಯವರು ಕಟ್ಟುತ್ತಿದ್ದಾರೆ’ ಎಂದು ಅವರು ದೂರಿದರು.

ಈ ರಾಜ್ಯದಿಂದ 25 ಸಂಸದರನ್ನು ನೀಡಿದ್ದೇವೆ. ಅಖಂಡ ಕರ್ನಾಟಕದ ನಾಲ್ಕು ಲಕ್ಷ ಕೋಟಿ ರೂ.ತೆರಿಗೆಯ ಲೆಕ್ಕ ಕೊಡಿ ಎಂದು ಕೇಳಿದರೆ ದೇಶದ್ರೋಹಿ ಆಗ್ತೀನಾ? ರಾಜ್ಯದ ಪಾಲು ನೂರು ರೂ. ಕೊಡಬೇಕಾದರೆ ಅದರಲ್ಲಿ ಕೇವಲ 75ಪೈಸೆ ಕೊಟ್ಟಿದ್ದೀರಿ. ಅದೇ ಉತ್ತರ ಪ್ರದೇಶಕ್ಕೆ 100 ರೂ.ಬದಲು 333 ರೂ.ಗಳನ್ನು ನೀಡಿ ತಾರತಮ್ಯ ಮಾಡಿದ್ದೀರಿ. ನಿಮಗೆ ಕನ್ನಡಿಗರ ದುಡ್ಡು ಕಾಣುತ್ತಿಲ್ಲಾ? ಎಂದು ಅವರು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News