ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಡಿಸಿಎಂ ಡಿಕೆಶಿ ವಿರುದ್ಧ ಎಫ್‍ಐಆರ್ ದಾಖಲಿಸಿದ ಲೋಕಾಯುಕ್ತ
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
2020ರ ಅಕ್ಟೋಬರ್ 3ರಂದು ಸಿಬಿಐ ದಾಖಲಿಸಿಕೊಂಡಿದ್ದ ಪ್ರಕರಣದ ಮರು ತನಿಖೆಗೆ ಲೋಕಾಯುಕ್ತ ಮುಂದಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಈ ಪ್ರಕರಣದ ಇದುವರೆಗಿನ ತನಿಖಾ ದಾಖಲೆಗಳನ್ನು ಒದಗಿಸುವಂತೆ ಸಿಬಿಐಗೆ ಪತ್ರ ಬರೆದಿದ್ದಾರೆ. ಆದರೆ, ಸಿಬಿಐ ಅಧಿಕಾರಿಗಳು ಇದುವರೆಗೂ ಯಾವುದೇ ದಾಖಲೆಗಳನ್ನು ಲೋಕಾಯುಕ್ತಕ್ಕೆ ನೀಡಿಲ್ಲ ಎಂದು ತಿಳಿದುಬಂದಿದೆ.
ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ಆದೇಶಿಸಿದ್ದ ಈ ಹಿಂದಿನ ಸರಕಾರ ಕಾನೂನು ಕ್ರಮಗಳನ್ನು ಅನುಸರಿಸಿಲ್ಲ ಎಂಬ ಕಾರಣ ನೀಡಿ ರಾಜ್ಯ ಸರಕಾರ ವಾಪಸ್ ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಡಿಸೆಂಬರ್ 22ರಂದು ಲೋಕಾಯುಕ್ತಕ್ಕೆ ವರ್ಗಾಯಿಸಲಾಗಿತ್ತು. ಒಂದು ತಿಂಗಳ ಬಳಿಕ ಸದ್ಯ ಲೋಕಾಯುಕ್ತದಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ.
ಕಾನೂನು ಹೋರಾಟ ಮುಂದುವರಿಸುವೆ:
ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ನಾನು ಕಾನೂನು ಹೋರಾಟ ಮುಂದುವರಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಪ್ರಕರಣವನ್ನು ಸಿಬಿಐಗೆ ನೀಡಲು ಆಗುವುದಿಲ್ಲ ಎಂದು ಅಂದಿನ ಅಡ್ವೊಕೇಟ್ ಜನರಲ್ ಹೇಳಿದ್ದರು. ಅದರ ದಾಖಲೆಯನ್ನು ನಾನು ಮಾಹಿತಿ ಹಕ್ಕು ಮೂಲಕ ಪಡೆದಿದ್ದೇನೆ. ಯಡಿಯೂರಪ್ಪನವರ ಸರಕಾರ ಸಿಬಿಐ ತನಿಖೆಗೆ ನೀಡಿದ್ದು ತಪ್ಪು. ಹೀಗಾಗಿ ನಮ್ಮ ಸರಕಾರ ಅನುಮತಿ ಹಿಂಪಡೆದು ಲೋಕಾಯುಕ್ತಕ್ಕೆ ನೀಡಿದೆ’ ಎಂದು ಸ್ಪಷ್ಟಪಡಿಸಿದರು.
ಹಿಂಪಡೆದರೂ ನೋಟೀಸ್: ಸರಕಾರ ನನ್ನ ವಿರುದ್ಧದ ತನಿಖೆಯ ಅನುಮತಿ ಹಿಂಪಡೆದ ನಂತರವೂ ಸಿಬಿಐನವರು ನನ್ನ ಸಂಸ್ಥೆಗಳು ಹಾಗೂ ನನ್ನ ಜತೆ ವ್ಯವಹಾರ ಮಾಡಿರುವವರಿಗೆ ನೂರಾರು ನೋಟೀಸ್ ನೀಡುತ್ತಿದ್ದಾರೆ. ಯಾಕೆ ನೊಟೀಸ್ ನೀಡುತ್ತಿದ್ದಾರೋ ನನಗೆ ಗೊತ್ತಿಲ್ಲ. ನಾನೂ ಕಾನೂನು ಹೋರಾಟ ಮಾಡುತ್ತೇನೆ’ ಎಂದು ಅವರು ತಿಳಿಸಿದರು.