ಭ್ರೂಣ ಪರೀಕ್ಷೆ, ಭ್ರೂಣಹತ್ಯೆ ತಡೆಗೆ ವಿಶೇಷ ನೀತಿ ಜಾರಿ: ಸಚಿವ ದಿನೇಶ್ ಗುಂಡೂರಾವ್

Update: 2023-12-12 14:53 GMT

ಬೆಳಗಾವಿ: ರಾಜ್ಯದಲ್ಲಿ ಬೆಳಕಿಗೆ ಬಂದಿರುವ ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ವಿಶೇಷವಾದ ನೀತಿಯೊಂದನ್ನು ಜಾರಿ ಮಾಡಲು ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳವಾರ ಪರಿಷತ್ತಿನ ಗಮನ ಸೆಳೆಯುವ ಸೂಚನೆಯಡಿ ರಾಜ್ಯದಲ್ಲಿ ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳು ವ್ಯಾಪಾಕವಾಗಿ ಹೆಚ್ಚುತ್ತಿರುವ ಕುರಿತು ಸದಸ್ಯರಾದ ಕೆ.ಎ. ತಿಪ್ಪೇಸ್ವಾಮಿ, ಭಾರತಿ ಶೆಟ್ಟಿ, ಶರವಣ ಸಿ.ಎನ್.ಮಂಜೇಗೌಡ ಸೇರಿದಂತೆ ಇನ್ನಿತರು ಪ್ರಸ್ತಾಪಿಸಿದ ವಿಷಯಕ್ಕೆ ಅವರು ಉತ್ತರಿಸಿದರು.

ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹೇಗೆ ಬೇಧಿಸಬಹುದು ಎಂಬುದರ ಬಗ್ಗೆ ಆರೋಗ್ಯ ಇಲಾಖೆಯು ಎಚ್ಚೆತ್ತುಕೊಂಡು ಗಂಭೀರ ಚಿಂತನೆ ನಡೆಸಿದೆ. ಈ ಬಗ್ಗೆ ಅಂಕಿಸಂಖ್ಯೆಗಳನ್ನು ಸಂಗ್ರಹಿಸಿ, ಗುಪ್ತಚರವಾಗಿ ಮಾಹಿತಿ ಪಡೆದು ಇಲಾಖೆಯ ಕಾರ್ಯಾಚರಣೆಯನ್ನು ಬಲಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಪಿಸಿಪಿಎನ್‍ಡಿಸಿ ಸೆಲ್‍ಗಳು ಕಾಲಕಾಲಕ್ಕೆ ಸಭೆ ನಡೆಸಿ ಜಿಲ್ಲಾ ಹಂತದಲ್ಲಿ ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣ ತಡೆಗೆ ಕಾರ್ಯ ಪ್ರವೃತ್ತವಾಗಿವೆ. ಸಕ್ರಿಯವಾಗಿ ಇನ್ನಷ್ಟು ಕಾರ್ಯಶೀಲೆತೆಯಿಂದ ಕಾರ್ಯಪ್ರವೃತ್ತವಾಗಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪಿಸಿಪಿಎನ್‍ಡಿಟಿ ಸೆಲ್‍ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಹೆಣ್ಣು ಮಗುವಿನ ಬಗ್ಗೆ ತಾತ್ಸಾರ ಮನೋಭಾವ ಸಲ್ಲದು. ಹೆಣ್ಣು ಮಗು ಕುಟುಂಬಕ್ಕೆ ಸಮಾಜಕ್ಕೆ ಭಾರ ಅನ್ನುವ ಮನಸ್ಥಿತಿಯಿಂದಲೇ ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳು ಕಂಡು ಬರುತ್ತಿವೆ. ಹೀಗಾಗಿ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಕಾನೂನು ಉಲ್ಲಂಘಿಸಿದರೆ ಜೈಲು ಸೇರಬೇಕಾಗುತ್ತದೆ ಎಂಬುದಾಗಿ ತಪ್ಪಿತಸ್ಥರಲ್ಲಿ ಭಯ ಹುಟ್ಟಲು ಬಿಗಿಯಾದ ಕಾನೂನು ಕ್ರಮಗಳನ್ನು ರೂಪಿಸಲು ಮತ್ತು ಇಲಾಖೆಯ ಕಾರ್ಯಾಚರಣೆಯನ್ನು ಬಲಗೊಳಿಸುವ ಎಲ್ಲ ಕ್ರಮಗಳನ್ನು ಏಕಕಾಲಕ್ಕೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಜಿಲ್ಲೆಗಳಲ್ಲಿರುವಂತೆ ರಾಜ್ಯಮಟ್ಟದಲ್ಲಿನ ಪಿಸಿಪಿಎನ್‍ಡಿಟಿ ಸೆಲ್‍ನ್ನು ಇನ್ನಷ್ಟು ಸಕ್ರಿಯಗೊಳಿಸಲಾಗುವುದು. ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ವಹಿಸಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸಹಕಾರ ಪಡೆದು ಶಾಲಾ ಕಾಲೇಜುಗಳಲ್ಲಿ ಈ ಬಗ್ಗೆ ವ್ಯಾಪಕವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲು ಕ್ರಮ ವಹಿಸಲಾಗುವುದು. ಪೊಲೀಸ್ ಇಲಾಖೆಯ ಸಹಕಾರ ಪಡೆದು ಕಾನೂನು ಬಾಹಿರ ಭ್ರೂಣ ಪರೀಕ್ಷೆ ಮತ್ತು ಭ್ರೂಣ ಹತ್ಯೆ ಪ್ರಕರಣಗಳನ್ನು ಹತ್ತಿಕ್ಕಲಾಗುವುದು ಎಂದು ಸಚಿವರು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News