ಕೊಟ್ಟ ಮಾತಿನಂತೆ ಯುವನಿಧಿ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಳಗಾವಿ: ನಾವು ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ ಈ ತಿಂಗಳ ಅಂತ್ಯದಲ್ಲಿ ಯುವನಿಧಿ ಯೋಜನೆ ಜಾರಿ ಪ್ರಕ್ರಿಯೆ ಆರಂಭಿಸುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ಯೋಜನೆ ಜಾರಿಗೆ ತಾಂತ್ರಿಕ ವಿಚಾರವಾಗಿ ಚರ್ಚೆ ಮಾಡಿದ್ದು, ಅನುಷ್ಠಾನದ ಜವಾಬ್ದಾರಿಯನ್ನು ಕೌಶ್ಯಲ್ಯಾಭಿವೃದ್ಧಿ ಸಚಿವರಿಗೆ ನೀಡಿದ್ದೇವೆ ಎಂದು ಹೇಳಿದರು.
ಜನವರಿಯಲ್ಲಿ ಈ ಯೋಜನೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಅಧಿಕೃತ ದಿನಾಂಕವನ್ನು ಸಚಿವರು ಪ್ರಕಟಿಸಲಿದ್ದಾರೆ. ಅಧಿವೇಶನ ಒಂದು ವಾರ ಮುಂದುವರಿಸಿ ಉತ್ತರ ಕರ್ನಾಟಕ ಸಮಸ್ಯೆ ಕುರಿತು ಚರ್ಚೆ ನಡೆಸಲಾಗುತ್ತಿದೆ. ಆದರೆ, ಬಿಜೆಪಿಯವರು ಏನು ಮಾಡುತ್ತಿದ್ದಾರೆ? ಕೇಂದ್ರ ಸರಕಾರ ಒಂದು ರೂಪಾಯಿ ಬರ ಪರಿಹಾರ ನೀಡಿಲ್ಲ.
ನರೇಗಾ ಯೋಜನೆಯಡಿ ಇರುವ 100 ಕೂಲಿ ದಿನಗಳನ್ನು 150ಕ್ಕೆ ಏರಿಸಲು ಕಾನೂನಿನಲ್ಲಿ ಅವಕಾಶ ಇದೆ. ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕಿ ಇದನ್ನು ಏರಿಸುವ ಪ್ರಯತ್ನವನ್ನು ಬಿಜೆಪಿಯವರು ಮಾಡಿಲ್ಲ ಎಂದು ಶಿವಕುಮಾರ್ ವಾಗ್ದಾಳಿ ನಡೆಸಿದರು.