‘ಗ್ಯಾರಂಟಿ’ ಗಳಿಂದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

Update: 2024-02-05 12:04 GMT

ಬೆಳಗಾವಿ: ನಾವು ಸೇತುವೆಯನ್ನೂ ಕಟ್ಟಿದ್ದೇವೆ, ಮಂದಿರವನ್ನೂ ಕಟ್ಟಿದ್ದೇವೆ. ಬಡ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬನೆಗಳನ್ನಾಗಿಯೂ ಮಾಡಿದ್ದೇವೆ. ಗ್ಯಾರಂಟಿಗಳನ್ನು ಟೀಕಿಸುವ ಬಿಜೆಪಿಯವರು ಯೋಜನೆಗಳ ಉಪಯೋಗ ಮಾಡಿಕೊಳ್ಳುತ್ತಿದ್ದಾರೋ, ಇಲ್ಲವೋ? ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಆರ್.ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.

ಸೋಮವಾರ ಜಿಲ್ಲಾಡಳಿತ, ಜಿ.ಪಂ., ಮಹಾನಗರ ಪಾಲಿಕೆ ಹಾಗೂ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ನಿಮ್ಮ ಕಷ್ಟಕ್ಕೆ ಸ್ಪಂದಿಸುವ ಭಾಷೆ ಕೊಟ್ಟಿದ್ದೆವು. ಜಿಲ್ಲೆಯಲ್ಲಿ ನೀವು 11 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದೀರಿ. ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್ ಪಕ್ಷ ಎಂದು ನುಡಿದರು.

‘ಭಾಗ್ಯಗಳ ಸರದಾರ ಖ್ಯಾತಿಯ ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ವಿಶ್ವಾಸ ಉಳಿಸಿಕೊಂಡಿದ್ದಾರೆ. ನಿಮ್ಮ ಸ್ವಾಭಿಮಾನ ಎತ್ತಿಹಿಡಿದು, ಆರ್ಥಿಕವಾಗಿ ಸ್ವಾವಲಂಬಿಯಾಗಿಸಲು ಕ್ರಮ ತೆಗೆದುಕೊಂಡಿದ್ದೇವೆ. ಕೆಲವರು 2ಸಾವಿರ ರೂ.ಎಂದರೆ ಅದೇನು ದೊಡ್ಡ ಮೊತ್ತವೇ ಎಂದು ಕೇಳುತ್ತಿದ್ದಾರೆ. ತರಕಾರಿ ಮಾರುವ ಮಹಿಳೆಯನ್ನು ಕೇಳಿ, ಬಿಸಿಲಿನಲ್ಲಿ ಕೆಲಸ ಮಾಡುವ ಉದ್ಯೋಗ ಖಾತ್ರಿಯ ಮಹಿಳೆಯರನ್ನು ಕೇಳಿ ವರ್ಷಕ್ಕೆ 24 ಸಾವಿರ ರೂ.ಅವರಿಗೆ ಎಷ್ಟು ಮುಖ್ಯ ಅನ್ನೋದು ತಿಳಿಯುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಬಿಜೆಪಿಯವರು ಶ್ರೀಮಂತರನ್ನು ಶ್ರೀಮಂತರನ್ನಾಗಿ ಮಾಡುತ್ತಾರೆ. ಅಂಬಾನಿ, ಅದಾನಿಯಂಥವರಿಗೆ ಸಹಾಯ ಮಾಡುತ್ತಾರೆ. ಆದರೆ ನಾವು ಬಡವರಿಗೆ ನೇರವಾಗಿ ಸಹಾಯ ಹಸ್ತ ನೀಡುತ್ತಿದ್ದೇವೆ. ಹಬ್ಬಗಳು ಬಂದಾಗ ಮಹಿಳೆಯರಿಗೆ ಒಂದು ಒಳ್ಳೆಯ ಸೀರೆ ಖರೀದಿಸಬೇಕೆನ್ನುವ ಆಸೆ ಬಂದರೆ ದುಡ್ಡಿಗಾಗಿ ಅಪ್ಪನನ್ನು ಕೇಳಲೋ, ಗಂಡನನ್ನು ಕೇಳಲೋ ಅಥವಾ ಪಕ್ಕದ ಮನೆಯವಳ ಬಳಿ ಸಾಲ ಪಡೆಯಲೋ ಎಂದು ಯೋಚಿಸುತ್ತಾರೆ. ಯಾರದ್ದೋ ಮುಂದೆ ಕೈಚಾಚುವ ಸ್ಥಿತಿಯಿರುತ್ತದೆ. ಈಗ ಗ್ಯಾರಂಟಿಗಳಿಂದಾಗಿ ಅಷ್ಟರ ಮಟ್ಟಿಗೆ ಸಹಾಯವಾಗಿದೆ. ನಿಮ್ಮಿಂದಲೇ ಬಂದ ನಮ್ಮ ಸರಕಾರ, ನಿಮ್ಮ ನೆರವಿಗೆ ನಿಂತಿದೆ ಎಂದು ಅವರು ಹೇಳಿದರು.

ಚುನಾವಣೆ ಹತ್ತಿರ ಬಂದಾಗ ಏನೇನೋ ವಿಷಯ ತರುತ್ತಾರೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬೇಡಿ. ಕಷ್ಟದಲ್ಲಿ ಸ್ಪಂದಿಸಿದವರಿಗೆ ಆಶೀರ್ವಾದ ಮಾಡುವುದು ನಮ್ಮ ಗುಣ. ಸರಕಾರಕ್ಕೆ ಆಶೀರ್ವಾದ ಮಾಡಿ. ಹೆಣ್ಣು ಮಕ್ಕಳು ಭಾಷೆ ಕೊಟ್ಟರೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಸ್ವಾಭಿಮಾನದಿಂದ ಜೀವನ ನಡೆಸಲು ಐದು ಗ್ಯಾರಂಟಿಗಳನ್ನು ನೀಡಿರುವ ನಮಗೆ ನಿಮ್ಮ ಆಶೀರ್ವಾದ ಇರಲಿ ಎಂದು ಅವರು ವಿನಂತಿಸಿದರು.

ಬೆಳಗಾವಿ ಜಿಲ್ಲೆಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಗಾಗಿ 212ಕೋಟಿ ರೂ.ಮೀಸಲಿಡಲಾಗುತ್ತಿದೆ. ನಾವು ಮಾತುಕೊಟ್ಟಂತೆ ನಡೆದುಕೊಳ್ಳುತ್ತಿದ್ದೇವೆ. ಇದು ಕೇವಲ ಚುನಾವಣೆ ಗಿಮಿಕ್ ಅಲ್ಲ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಜನ ಪ್ರತಿನಿಧಿಗಳನ್ನು ಮುಂದಿನ ದಿನಗಳಲ್ಲಿ ಆರಿಸಿ ಕಳುಹಿಸಬೇಕು ಎಂದು ಹೆಬ್ಬಾಳ್ಕರ್ ಹೇಳಿದರು.

ಗೌರವ ಧನ ಹೆಚ್ಚಳ: ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವುದು ಬಾಕಿ ಇದೆ. ನಿಮ್ಮ ಸೇವೆಯನ್ನು ಗುರುತಿಸಿದ್ದೇವೆ. ಶೀಘ್ರವೇ ಕೊಟ್ಟ ಭಾಷೆಯನ್ನು ಈಡೇರಿಸುತ್ತೇವೆ. ಇಲಾಖೆಯಿಂದ ಇನ್ನೂ ಹಲವು ಒಳ್ಳೆಯ ಯೋಜನೆಗಳನ್ನು ಜಾರಿಗೆ ತರುತ್ತೇನೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News