ಪಕ್ಷದ ಮತ ಪ್ರಮಾಣ ಹೆಚ್ಚಿಸಿಕೊಳ್ಳಿ...: ಕಾರ್ಯಕರ್ತರಿಗೆ ಡಿ.ಕೆ ಶಿವಕುಮಾರ್ ʼಟಾಸ್ಕ್ʼ
ಬೆಂಗಳೂರು: "ಪಕ್ಷದ ಮತ ಪ್ರಮಾಣ ಹೆಚ್ಚಿಸಿಕೊಳ್ಳಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಸಂದೇಶ ನೀಡಿದ್ದಾರೆ.
ಅವರು ಶುಕ್ರವಾರ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ʼʼಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಸೇರ್ಪಡೆ ಮಾಡಿಕೊಳ್ಳಲು ಕಾರ್ಯಕರ್ತರಿಗೆ ತಿಳಿಸಿದ್ದೇನೆ. ಉಳಿದಂತೆ ಯಾರದೇ ಪಕ್ಷ ಸೇರ್ಪಡೆ ವಿಚಾರ ಬಂದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ನೀವು ಬೇರೆ ಪಕ್ಷದ ಶಾಸಕರ ಜೊತೆ ಖುದ್ದಾಗಿ ಮಾತನಾಡಿದ್ದೀರಿ ಎಂಬ ಮಾತಿದೆಯಲ್ಲ ಎಂದು ಕೇಳಿದಾಗ, "ನಿಮ್ಮ ಮಾಹಿತಿ ಸಂಪೂರ್ಣ ಸುಳ್ಳು. ಬಿಜೆಪಿಯವರು ಯಾರ ಜೊತೆ ಮಾತನಾಡಿದ್ದಾರೆ ಎಂಬುದರ ಬಗ್ಗೆ ನೀವು ಚರ್ಚೆ ಮಾಡುತ್ತಿಲ್ಲ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅವರು ಭಾವಿಸಿದ್ದಾರೆ. ಅವರು ಕಲಿಸಿ ಕೊಟ್ಟಿರುವ ಪಾಠ ನಮಗೆ ನೆನಪಿದೆ. ಜನ ನಮಗೆ 135 ಸಂಖ್ಯಾಬಲ ನೀಡಿದ್ದಾರೆ. ನಾವು ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಬಿಜೆಪಿ ಹಾಗೂ ದಳದವರಿಗೆ ನೆಮ್ಮದಿ ಇಲ್ಲ. ಅದಕ್ಕೆ ಅವರೇ ಔಷಧಿ ಕಂಡುಕೊಳ್ಳಬೇಕು. ಗೆದ್ದಿರುವವರು, ಸೋತಿರುವವರು ಮಾತನಾಡುತ್ತಿದ್ದಾರೆ. ಯಾರು ಏನು ಮಾತನಾಡುತ್ತಿದ್ದಾರೆ ಎಂದು ನಾವು ಗಮನಿಸುತ್ತಿದ್ದೇವೆ. ನಾವು ಯಾರ ಮಾತಿಗೂ ಬೀಗ ಹಾಕುವುದಿಲ್ಲ" ಎಂದು ತಿಳಿಸಿದರು.
ಬಿಜೆಪಿ ನಾಯಕರು ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆಯೇ ಎಂದು ಕೇಳಿದಾಗ, "ತಾವು ರಾಜಕೀಯವಾಗಿ ಬದುಕಿದ್ದೇವೆ ಎಂದು ಸಾಬೀತುಪಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ" ಎಂದು ತಿಳಿಸಿದರು.
ಜೆಡಿಎಸ್ ನ 13 ಶಾಸಕರು ನಿಮ್ಮ ಸಂಪರ್ಕದಲ್ಲಿದ್ದು, ಮುಂದೆ ಅವರು ನಿಮಗೆ ಬೆಂಬಲ ನೀಡಲಿದ್ದಾರೆ ಎಂಬ ಮಾಹಿತಿ ಇದೆಯಲ್ಲ ಎಂಬ ಪ್ರಶ್ನೆಗೆ, "ಈ ವಿಚಾರ ನನಗೆ ಗೊತ್ತಿಲ್ಲ. ನಿಮ್ಮಿಂದಲೇ ಈಗ ಮಾಹಿತಿ ಕೇಳುತ್ತಿದ್ದೇನೆ. ನನಗೆ 224 ಶಾಸಕರು ಪರಿಚಯಸ್ಥರು. ಎಲ್ಲರ ಜತೆ ರಾಜಕೀಯವಾಗಿ ಅಲ್ಲದಿದ್ದರೂ ವೈಯಕ್ತಿಕ ಸಂಬಂಧ ಇದೆ. ಅವರ ಹೆಸರಿಗೆ ನಾವು ಧಕ್ಕೆ ಯಾಕೆ ತರೋಣ?" ಎಂದು ತಿಳಿಸಿದರು.
ಪಕ್ಷ ಬಿಟ್ಟು ಹೋದವರು ಬಂದರೆ ಪಕ್ಷದ ಬಾಗಿಲು ತೆರೆದಿರುತ್ತದೆಯೇ ಎಂದು ಕೇಳಿದಾಗ, "ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು" ಎಂದು ತಿಳಿಸಿದರು.
40% ಕಮಿಷನ್ ವಿಚಾರ ತನಿಖೆಗೆ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿ ರಚನೆ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ನಾನು ಏನನ್ನೂ ಹೇಳುವುದಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಉತ್ತರ ನೀಡಲಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ತನಿಖೆಗೆ ಸಮಿತಿ ರಚನೆ ಮಾಡಿದ್ದು, ಅವರು ತನಿಖೆ ಮಾಡುತ್ತಿದ್ದಾರೆ" ಎಂದು ತಿಳಿಸಿದರು.