ಹೆಚ್ಚಾದ ಅಗ್ನಿ ದುರಂತ | ಬೆಂಗಳೂರಿನ ಹೋಟೆಲ್, ಪಬ್‍ಗಳಲ್ಲಿ ಅಗ್ನಿ ಸುರಕ್ಷತೆ ಪರಿಶೀಲನೆಗೆ ಸೂಚನೆ

Update: 2023-10-19 13:30 GMT

ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.19: ನಗರದ ವಿವಿಧ ಪ್ರದೇಶಗಳಲ್ಲಿ ಹಲವು ಅಗ್ನಿ ದುರಂತಗಳು ಸಂಭವಿಸುತ್ತಿರುವ ಹಿನ್ನೆಲೆ, ಪಬ್, ಹೋಟೆಲ್, ರೆಸ್ಟೋರೆಂಟ್, ಬೃಹತ್ ಮಳಿಗೆಗಳಲ್ಲಿ ಆಗ್ನಿಶಾಮಕ ಸುರಕ್ಷಾ ಕ್ರಮಗಳನ್ನು ಪರಿಶೀಲನೆ ನಡೆಸಲು ಅಗ್ನಿ ಶಾಮಕದಳದ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳಲ್ಲಿ ವಿಜಯನಗರ, ಚಾಮರಾಜಪೇಟೆ, ಲಗ್ಗೆರೆ ಮತ್ತು ಕೋರಮಂಗಲದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಅಪಾರ ಪ್ರಮಾಣದ ಆಸ್ತ-ಪಾಸ್ತಿ ಹಾನಿಯಾಗಿದೆ. ಪದೇ ಪದೇ ಅಗ್ನಿ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಇತ್ತೀಚಿನ ಅಗ್ನಿ ಅವಘಡಗಳಲ್ಲಿ ಸೂಕ್ತ ಮುಂಜಾಗ್ರತ ಕ್ರಮ ಅನುಸರಿಸುತ್ತಿಲ್ಲ. ತ್ವರಿತಗತಿಯಲ್ಲಿ ಬೆಂಕಿ ನಂದಿಸುವ ಸಲಕರಣೆ ವ್ಯವಸ್ಥಿತಗೊಳಿಸದಿರುವುದು ಕಂಡು ಬಂದಿದೆ. ಹೀಗಾಗಿ ಮಳಿಗೆಗಳು ಸೇರಿದಂತೆ ನಗರದ ಎಲ್ಲಾ ಬಹುಮಹಡಿ ಕಟ್ಟಡಗಳು, ಅಪಾರ್ಟ್‍ಮೆಂಟ್‍ಗಳ ಪರಿಶೀಲನೆ ನಡೆಸಿ ನಿಯಮ ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಮಲ್ ಪಂತ್ ಆದೇಶಿಸಿದ್ದಾರೆ.

ಕೋರಮಂಗಲದ ಫೆÇೀರಂ ಮಾಲ್ ಮುಂಭಾಗದಲ್ಲಿರುವ ಮಾರುತಿ ಕಾರು ಶೋ ರೂಂನ ನಾಲ್ಕನೇ ಮಹಡಿಯ ಪಬ್‍ನಲ್ಲಿ ಸಂಭವಿಸಿದ ಅಗ್ನಿ ಅವಘಡ ಪರಿಶೀಲಿಸಿದ ಕಮಲ್ ಪಂತ್, ಈ ರೀತಿಯ ಅವಘಡಗಳು ಮತ್ತೊಮ್ಮೆ ನಡೆಯಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಜರುಗಿಸಬೇಕು ಎಂದು ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News