ಕಾವೇರಿ ಒಳಹರಿವು ಹೆಚ್ಚಳ; ರಾಜ್ಯದ ಪಾಲಿಗೆ ಕೊಂಚ ನಿರಾಳ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-10-01 18:20 GMT

ಬೆಂಗಳೂರು, ಅ. 1: ‘ರಾಜ್ಯದ ಕಾವೇರಿ ನದಿ ಪಾತ್ರದ ಆಣೆಕಟ್ಟುಗಳ ಒಳಹರಿವು 15 ಸಾವಿರ ಕ್ಯೂಸೆಕ್‍ಗೆ ಹೆಚ್ಚಾಗಿದ್ದು, ಇದು ರಾಜ್ಯದ ಪಾಲಿಗೆ ಸ್ವಲ್ಪ ನಿರಾಳತೆ ತಂದಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಚಿತ್ರಕಲಾ ಪರಿಷತ್‍ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಹಿರಿಯ ನ್ಯಾಯಮೂರ್ತಿಗಳು ಹಾಗೂ ವಕೀಲರ ಜೊತೆ ಚರ್ಚೆ ಮಾಡಿ ತಮಿಳುನಾಡಿಗೆ ನೀರು ಹರಿಸುವ ತೀರ್ಮಾನ ಪುನರ್ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಿನ್ನೆ ಮೇಲ್ಮನವಿ ಸಲ್ಲಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಒಳ ಹರಿವು ಹೆಚ್ಚಾಗಿದ್ದು, ಮಳೆ ಬೀಳಲಿ ಎಂದು ಎಲ್ಲ ಜನರು ಪ್ರಾರ್ಥನೆ ಮಾಡಬೇಕಿದೆ. ರೈತರ ಬೆಳೆ ಹಾಳಾಗದಂತೆ ಈಗಾಗಲೇ ನೀರು ಬಿಟ್ಟಿದ್ದೇವೆ. ತಮಿಳುನಾಡಿಗೆ ಕೆಆರ್‍ಎಸ್ ಮೂಲಕ ನೀರು ಹರಿಸದಿದ್ದರೂ ಬೆಂಗಳೂರು ಹಾಗೂ ಸುತ್ತಮುತ್ತಲ ಭಾಗದಲ್ಲಿ ಬಿದ್ದ ಮಳೆ ಹಾಗೂ ಸೀಪೆಜ್ ಮೂಲಕ ಆರೂವರೆ ಸಾವಿರ ಕ್ಯೂಸೆಕ್ ಅನಿಯಂತ್ರಿತ ನೀರು ಹರಿದಿದೆ. ಹೀಗಾಗಿ ನಮ್ಮಲ್ಲಿ ಮಳೆ ಬಂದಷ್ಟು ನಮಗೆ ಶಕ್ತಿ ಬರುತ್ತದೆ. ಉಳಿದಂತೆ ಕಾವೇರಿ ವಿಚಾರದಲ್ಲಿ ಕಾನೂನು ಹೋರಾಟಕ್ಕೆ ನಾವು ಬದ್ಧವಿದ್ದೇವೆ’ ಎಂದು ಅವರು ತಿಳಿಸಿದರು.

ಜಾತಿ ಆಧಾರದ ಮೇಲೆ ಹುದ್ದೆ ನೀಡುವುದಿಲ್ಲ: ‘ಶಾಮನೂರು ಅವರು ಒಂದು ಸಮಾಜದ ಅಧ್ಯಕ್ಷರು. ಅವರಿಗೆ ಆ ಸಮಾಜಕ್ಕೆ ಎಷ್ಟು ಸ್ಥಾನ ಸಿಕ್ಕಿದೆ ಎಂಬ ಮಾಹಿತಿ ಇದೆ. ಅಧಿಕಾರಿಗಳು ಸಹಜವಾಗಿ ತಮಗೆ ಉತ್ತಮ ಹುದ್ದೆ ನೀಡಬೇಕೆಂದು ನಿರೀಕ್ಷಿಸುತ್ತಾರೆ. ಆದರೆ ಸರಕಾರ ಜಾತಿ ಆಧಾರದ ಮೇಲೆ ಹುದ್ದೆ ನೀಡಲು ಆಗುವುದಿಲ್ಲ. ನಾವು ಎಲ್ಲರನ್ನೂ ಗಮನಿಸಬೇಕು. ಸಿಎಂ ಎಲ್ಲರನ್ನೂ ಸಮತೋಲನ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ಸಿಎಂ ಮೇಲೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಮಂತ್ರಿಗಳಾದ ನಮ್ಮಲ್ಲೂ ಸಾಮಾನ್ಯ ಪ್ರಜ್ಞೆ ಇರಬೇಕು. ನಾವು ಯಾರಾದರೂ ಒಬ್ಬರಿಗೆ ಪೆÇೀಸ್ಟಿಂಗ್ ನೀಡಲು ಸಾಧ್ಯವೇ? ನಾವು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಬೇಕು. ಸರಕಾರ ಎಂದರೆ ಎಲ್ಲವೂ ಸಿಎಂ ಮೇಲೆ ಹಾಕಬಾರದು. ಸಚಿವರಾದ ನಾವುಗಳು ಜವಾಬ್ದಾರಿ ವಹಿಸಿಕೊಳ್ಳಬೇಕು. ಎಲ್ಲ ಕಾಲದಲ್ಲೂ ಇದು ನಡೆದುಕೊಂಡು ಬಂದಿದೆ. ಶಾಮನೂರು ಅವರು ನಮ್ಮ ಪಕ್ಷದ ನಾಯಕರು. ಅವರ ಮೇಲೂ ಒತ್ತಡ ಇರುತ್ತದೆ. ಕೆಲವು ಅಧಿಕಾರಿಗಳು ಸಚಿವರ ಬಳಿಯೂ ಹೋಗಿ ಮನವಿ ಮಾಡಿದ್ದಾರೆ. ಈ ರೀತಿ ಕೇಳುವುದರಲ್ಲಿ ತಪ್ಪಿಲ್ಲ’ ಎಂದು ತಿಳಿಸಿದರು.

‘ಬಿಜೆಪಿಯವರು ಆಪರೇಷನ್ ಕಮಲದ ಬಗ್ಗೆ ಯೋಚಿಸಲಿ. ಸದನದಲ್ಲಿ ಶಾಸಕ ಶ್ರೀನಿವಾಸ್ ಗೌಡ ಅವರು ಏನು ಹೇಳಿದರು. ಹೊರಗಡೆ ಏನೆಲ್ಲಾ ನಡೆಯಿತು ಎಂದು ಯೋಚಿಸಲು ಹೇಳಿ. ಅವರ ಸಂಸತ್ ಕ್ಷೇತ್ರದಲ್ಲಿ ಏನೆಲ್ಲಾ ಆಗಿದೆ ಎಂದು ಮೆಲುಕು ಹಾಕಲಿ’ ಎಂದು ಡಿಕೆಶಿ, ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News