ಸ್ವಾತಂತ್ರ್ಯೋತ್ಸವ ನಮ್ಮೆಲ್ಲರ ಕರ್ತವ್ಯವನ್ನು ನೆನಪು ಮಾಡಿಕೊಳ್ಳುವ ದಿನ: ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಸ್ವಾತಂತ್ರ್ಯೋತ್ಸವ ಎನ್ನುವುದು ಕೇವಲ ಸಂಭ್ರಮಾಚರಣೆಯ ದಿನ ಆಗದೆ, ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯವನ್ನು ನೆನಪು ಮಾಡಿಕೊಳ್ಳುವ ದಿನವೂ ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿರುವ ಅವರು, ಪ್ರಜೆಗಳಾಗಿ ನಾವು ಪ್ರತಿಕ್ಷಣವೂ ಜಾಗೃತರಾಗಿದ್ದು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದಮನ ಮಾಡುವ ದುಷ್ಟಶಕ್ತಿಗಳ ಕುಟಿಲ ಪ್ರಯತ್ನವನ್ನು ವಿಫಲಗೊಳಿಸಿ ಅದನ್ನು ರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ. ಸ್ವಾತಂತ್ರ್ಯದ ಈ ಸಂಭ್ರಮದ ಸಂದರ್ಭದಲ್ಲಿ ಪರಸ್ಪರ ಸಾಮರಸ್ಯ, ಸೌಹಾರ್ದವನ್ನು ಇನ್ನಷ್ಟು ಬಲಪಡಿಸುವ, ಆ ಮೂಲಕ ದಾರ್ಶನಿಕರು ತೋರಿಸಿಕೊಟ್ಟ ಹಾದಿಯಲ್ಲಿ ಮುನ್ನಡೆಯುವ ಸಂಕಲ್ಪ ಮಾಡಬೇಕಾಗಿದೆ ಎಂದಿದ್ದಾರೆ.
ಸಾವಿರಾರು ಮಹನೀಯರ ಹೋರಾಟ, ತ್ಯಾಗ, ಪರಿಶ್ರಮಗಳ ಫಲವನ್ನು ನಾವು ಇಂದು ಉಣ್ಣುತ್ತಿದ್ದೇವೆ. ಇಂದು ನಮ್ಮ ಕೈಯಲ್ಲಿರುವ ಸ್ವಾತಂತ್ರ್ಯದ ದೀವಿಗೆಯನ್ನು ಮುಂದಿನ ತಲೆಮಾರಿಗೆ ಜತನದಿಂದ ತಲುಪಿಸುವ ಅತ್ಯಂತ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹೊಣೆಗಾರಿಕೆಯನ್ನು ಅರಿತುಕೊಂಡು ನಾವು ಮುನ್ನಡೆಯಬೇಕಿದೆ ಎಂದು ಹೇಳಿದ್ದಾರೆ.