ಸಭೆಯ ಅಂತಿಮ ಸಂಕಲ್ಪ ಪ್ರಕಟಿಸಿದ 'INDIA'

Update: 2023-07-18 13:48 GMT

ಬೆಂಗಳೂರು, ಜು.18: ಕಳೆದ ಎರಡು ದಿನಗಳಿಂದ ರಾಜಧಾನಿ ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಿದ ರಾಷ್ಟ್ರೀಯ ವಿಪಕ್ಷಗಳು (ಇಂಡಿಯಾ) ತಮ್ಮ ಸಾಮೂಹಿಕ ಸಂಕಲ್ಪ ಅಂಶಗಳನ್ನು ಪ್ರಕಟಿಸಿವೆ.

*ಸಂವಿಧಾನದ ಆಧಾರ ಸ್ತಂಭಗಳು ದುರ್ಬಲ: ನಮ್ಮ ಗಣರಾಜ್ಯದ ಚಾರಿತ್ರ್ಯದ ಮೇಲೆ ಬಿಜೆಪಿಯವರು ವ್ಯವಸ್ಥಿತ ರೀತಿಯಲ್ಲಿ ತೀವ್ರ ಪ್ರಮಾಣದಲ್ಲಿ ಹಲ್ಲೆ ನಡೆಸುತ್ತಿದ್ದಾರೆ. ಭಾರತೀಯ ಸಂವಿಧಾನದ ಆಧಾರ ಸ್ತಂಭಗಳಾದ-ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸಾರ್ವಭೌಮತ್ವ, ಸಾಮಾಜಿಕ ನ್ಯಾಯ ಮತ್ತು ಫೆಡರಲಿಸಂ-ಕ್ರಮಬದ್ಧವಾಗಿ ಮತ್ತು ಭಯಂಕರವಾಗಿ ದುರ್ಬಲಗೊಳಿಸಲಾಗುತ್ತಿದೆ.

*ಮೀರಿದ ಸಾಂವಿಧಾನಿಕ ಮಾನದಂಡಗಳು: ಸಂವಿಧಾನದ ಮೇಲೆ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತ ರಾಜ್ಯ ಸರಕಾರಗಳ ಸಾಂವಿಧಾನಿಕ ಹಕ್ಕುಗಳ ಮೇಲಿನ ನಿರಂತರ ದಾಳಿಯನ್ನು ಎದುರಿಸಲು ಮತ್ತು ತಡೆಯಲು ನಿರ್ಧರಿಸಲಾಗಿದೆ. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಮತ್ತು ಎಲ್‍ಜಿಗಳ ಪಾತ್ರವು ಎಲ್ಲ ಸಾಂವಿಧಾನಿಕ ಮಾನದಂಡಗಳನ್ನು ಮೀರಿ ಇದೆ. ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಬಿಜೆಪಿ ಸರಕಾರ ಸಂಸ್ಥೆಗಳ ದುರುಪಯೋಗ ನಮ್ಮ ಪ್ರಜಾಪ್ರಭುತ್ವ ದುರ್ಬಲಗೊಳಿಸುತ್ತಿದೆ.

* ಮಿತಿ ಮೀರಿದ ನಿರುದ್ಯೋಗ, ಆರ್ಥಿಕ ಬಿಕ್ಕಟ್ಟು: ನಿರುದ್ಯೋಗದಿಂದಾಗಿ ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಿ ಬಂದಿದೆ. ನಾವು ನಮ್ಮ ಸಂಕಲ್ಪವನ್ನು ಬಲಪಡಿಸಿದ್ದು, ಈ ವಿಚಾರದಲ್ಲಿ ಗಮನ ಹರಿಸಲು ತೀರ್ಮಾನಿಸಿದ್ದೇವೆ. ನೋಟು ಅಮಾನ್ಯೀಕರಣವು ಎಂಎಸ್‍ಎಂಇ ಮತ್ತು ಅಸಂಘಟಿತ ವಲಯಗಳ ಸಂಕಷ್ಟಕ್ಕೆ ಕಾರಣವಾಗಿದೆ. ಇದರ ಪರಿಣಾಮವಾಗಿ ನಮ್ಮ ಯುವಕರಲ್ಲಿ ದೊಡ್ಡ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ.

ಹಾಗೇ, ರಾಷ್ಟ್ರದ ಸಂಪತ್ತನ್ನು ತಮ್ಮ ಪರ ಒಲವು ಹೊಂದಿರುವ ಆತ್ಮೀಯರು ಅಥವಾ ಆಪ್ತರಿಗೆ ಯಾವುದೇ ಜಾಗರೂಕತೆ ಇಲ್ಲದ ರೀತಿ ಮಾರಾಟ ಮಾಡುವುದನ್ನು ನಾವು ವಿರೋಧಿಸುತ್ತೇವೆ. ನಾವು ಬಲವಾದ ಮತ್ತು ಕಾರ್ಯತಂತ್ರದ ಸಹಕಾರ ಪಡೆದು ಸಾರ್ವಜನಿಕ ವಲಯದ ಜೊತೆಗೆ ಸ್ಪರ್ಧಾತ್ಮಕ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಖಾಸಗಿ ವಲಯದೊಂದಿಗೆ ನ್ಯಾಯಯುತ ಆರ್ಥಿಕತೆಯನ್ನು ನಿರ್ಮಿಸಬೇಕು.

*ಕಿಸಾನ್ ಮತ್ತು ಖೇತ್ ಮಜ್ದೂರ್ ಕಲ್ಯಾಣಕ್ಕೆ ಯಾವಾಗಲೂ ಹೆಚ್ಚಿನ ಆದ್ಯತೆ ಸಿಗಬೇಕು ಎಂಬುದು ನಮ್ಮ ಒಲವು ಎಂಬ ತೀರ್ಮಾನಕ್ಕೆ ಇಂಡಿಯಾ ಸಂಕಲ್ಪ ಕೈಗೊಂಡಿದೆ.

* ಕೋಮುವಾದ: ಅಲ್ಪಸಂಖ್ಯಾತರ ವಿರುದ್ಧ ಸಮಾಜದಲ್ಲಿ ಉದ್ಭವಿಸುತ್ತಿರುವ ದ್ವೇಷ ಮತ್ತು ಹಿಂಸೆಯನ್ನು ಸೋಲಿಸಲು ನಾವು ಒಟ್ಟಾಗಿ ಬಂದಿದ್ದೇವೆ. ಮಹಿಳೆಯರು, ದಲಿತರು, ಆದಿವಾಸಿಗಳು ಮತ್ತು ಕಾಶ್ಮೀರಿ ಪಂಡಿತರ ಮೇಲೆ ಹೆಚ್ಚುತ್ತಿರುವ ಅಪರಾಧಗಳನ್ನು ನಿಲ್ಲಿಸಬೇಕಾಗಿದೆ.

*ಎಲ್ಲ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ನ್ಯಾಯಯುತ ವಿಚಾರಣೆಗೆ ಬೇಡಿಕೆ ಮತ್ತು ಮೊದಲ ಹಂತವಾಗಿ, ಜಾತಿ ಗಣತಿ ಜಾರಿಗೊಳಿಸುವುದು ನಮ್ಮ ದ್ಯೇಯ ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

*ಬಿಜೆಪಿಯ ವ್ಯವಸ್ಥಿತ ಪಿತೂರಿ ವಿರುದ್ಧ ಹೋರಾಟ: ನಮ್ಮ ಭಾರತೀಯರಲ್ಲಿ ಕೆಲವರನ್ನು ಮಾತ್ರ ಗುರಿಯಾಗಿಸುವ, ಕಿರುಕುಳ ನೀಡುವ ಮತ್ತು ನಿಗ್ರಹಿಸುವ ಬಿಜೆಪಿಯ ವ್ಯವಸ್ಥಿತ ಪಿತೂರಿಯ ವಿರುದ್ಧ ಹೋರಾಡಲು ನಾವು ನಿರ್ಧರಿಸಿದ್ದೇವೆ.

*ಮಣಿಪುರವನ್ನು ನಾಶಪಡಿಸಿದ ಮಾನವೀಯ ದುರಂತದ ಬಗ್ಗೆ ನಾವು ನಮ್ಮ ತೀವ್ರ ಕಳವಳ ವ್ಯಕ್ತಪಡಿಸುತ್ತೇವೆ. ಈ ವಿಚಾರದಲ್ಲಿ ಪ್ರಧಾನಿಯವರ ಮೌನ ಆಘಾತಕಾರಿ ಮತ್ತು ಅಚ್ಚರಿದಾಯಕವಾಗಿದೆ. ಮಣಿಪುರವನ್ನು ಶಾಂತಿ ಮತ್ತು ಸೌಹಾರ್ದತೆಯ ಹಾದಿಗೆ ಮರಳಿ ತರುವ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂಡಿಯಾ ಬಲಗೊಂಡು ಪ್ರಯತ್ನ ಮಾಡಬೇಕಿದೆ ಎಂಬ ಪ್ರಮುಖ ಸಂಕಲ್ಪ ಮಾಡಲಾಗಿದೆ.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News