ಆರೆಸ್ಸೆಸ್‍ನ ‘ಭಾರತೀಯ ಸಂಸ್ಕೃತಿ ಉತ್ಸವ’ದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸಬಾರದು : ಸಾಹಿತಿ, ಪ್ರಗತಿಪರ ಚಿಂತಕರ ಒತ್ತಾಯ

Update: 2024-12-02 14:38 GMT

ಸಾಂದರ್ಭಿಕ ಚಿತ್ರ(PTI)

ಬೆಂಗಳೂರು: ಕಲಬುರಗಿ ಜಿಲ್ಲೆಯ ಸೇಡಂನಲ್ಲಿ 2025ರ ಜನವರಿ 29ರಿಂದ ಆರೆಸ್ಸೆಸ್ ಆಯೋಜಿಸಿರುವ ಭಾರತೀಯ ಸಂಸ್ಕೃತಿ ಉತ್ಸವ ಎಂಬ ಅಖಿಲ ಭಾರತ ಮಟ್ಟದ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಹಲವು ಸಚಿವರ ಹೆಸರುಗಳಿದ್ದು, ಸರಕಾರದ ಎಲ್ಲ ಸಚಿವರು ಮತ್ತು ಸಂವಿಧಾನದ ಪರ ಇರುವ ಕಾಂಗ್ರೆಸ್‍ನ ಹಿರಿಯ ನಾಯಕರರು, ಈ ‘ಕೋಮುವಾದಿ ಸಮ್ಮೇಳನ’ದಲ್ಲಿ ಭಾಗವಹಿಸಬಾರದು ಎಂದು ಪ್ರಗತಿಪರ ಚಿಂತಕರು, ಸಾಹಿತಿಗಳು, ಹೋರಾಟಗಾರರು ಒತ್ತಾಯಿಸಿದ್ದಾರೆ.

ಈ ಕಾರ್ಯಕ್ರಮಕ್ಕೆ ನಾನು ಭಾಗವಹಿಸುತ್ತಿಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಹಿರಂಗವಾಗಿ ಘೋಷಣೆ ಮಾಡುವ ಮೂಲಕ ಅವರು ಸಂವಿಧಾನದ ಹೆಸರಿನಲ್ಲಿ ತೆಗೆದುಕೊಂಡ ಪ್ರತಿಜ್ಞೆಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ.

ಆದರೆ, ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಇರುವುದು ಕೇವಲ ಮುಖ್ಯಮಂತ್ರಿಯವರ ಹೆಸರು, ಪ್ರಿಯಾಂಕ್‌ ಖರ್ಗೆಯವರ ಹೆಸರು ಮಾತ್ರವಲ್ಲ. ಸಂಘಟಕರು ಹೊರತಂದಿರುವ 52 ಪುಟಗಳ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿಗಳು ಸೇರಿದಂತೆ ಸಚಿವ ಸಂಪುಟದ ಹಲವು ಸಚಿವರು, ಸಂಸದರು ಮತ್ತು ಕಾಂಗ್ರೆಸ್‍ನ ಹಿರಿಯ ನಾಯಕರೂ ಭಾಗವಹಿಸಲಿದ್ದಾರೆ ಎಂದು ಅವರ ಹೆಸರುಗಳನ್ನು ಮುದ್ರಿಸಲಾಗಿದೆ. ಇಷ್ಟೇ ಅಲ್ಲದೆ, ಕಾರ್ಯಕ್ರಮದ ಸಿದ್ಧತೆಗಾಗಿ ಇಲಾಖಾವಾರು ಸಭೆಗಳು ನಡೆದಿವೆ ಎಂಬ ಮಾಹಿತಿ ಇದೆ.

ಜೊತೆಗೆ, ಈ ಸಮ್ಮೇಳನದಲ್ಲಿ ಭಾಗಿಯಾಗುವ ನಿರ್ಧಾರದಿಂದ ಸಚಿವರು ಮತ್ತು ಕಾಂಗ್ರೆಸ್ ನಾಯಕರು ಹಿಂದೆ ಸರಿದರೆ ಮಾತ್ರ ಸಾಲದು, ಹಿಂದುತ್ವದ ಹಲವು ಮುಖಗಳ ಸೈದ್ಧಾಂತಿಕ ದಾಳಿಯನ್ನು ಎದುರಿಸುವ ಸೈದ್ಧಾಂತಿಕ ಕಾರ್ಯಕ್ರಮವನ್ನು ಜನಾಂದೋಲನವಾಗಿ ಕಾಂಗ್ರೆಸ್ ನಾಯಕರು ರೂಪಿಸಬೇಕು.

ಆರೆಸ್ಸೆಸ್‍ನ ಶತಮಾನೋತ್ಸವ ಸಂದರ್ಭದ ಪೀಠಿಕಾ ಕಾರ್ಯಕ್ರಮದಂತೆ ಇದನ್ನು ಸಂಘಟಿಸಲಾಗಿದೆ. ಇದೇ ಆರೆಸ್ಸೆಸ್ ನೂರು ವರ್ಷಗಳ ಹಿಂದೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಪ್ರತಿಜ್ಞೆಗೈದಿದ್ದನ್ನು ನಾವು ನೆನಪಿಸಿಕೊಳ್ಳಬೇಕು. ಈ ಉದ್ದೇಶಕ್ಕಾಗಿಯೇ ‘ಭಾರತೀಯ ಸಂಸ್ಕೃತಿ ಉತ್ಸವ’ ಎಂಬ ಹೆಸರಿನ ಪುರೋಹಿತಶಾಹಿತ್ವದ ಉತ್ಸವ ನಡೆಸಲಾಗುತ್ತಿದೆ. ಪುರೋಹಿತಶಾಹಿಗಳಿಗೆ ಗೌರವಿಸುವ ಸಂವಿಧಾನ (ಮನುಸ್ಮೃತಿ)ಕ್ಕಾಗಿ ಈ ಉತ್ಸವ. ಸಂವಿಧಾನವನ್ನು ಗೌರವಿಸಿ ಮಾನವೀಯತೆ, ಸೌಹಾರ್ದತೆ, ಶಾಂತಿ , ಬಂಧುತ್ವ, ಬಹುತ್ವ , ಬಹುಸಂಸ್ಕೃತಿ, ಬಹುಭಾಷೆ ಮತ್ತು ಸಮಗ್ರತೆಯನ್ನು ಬಯಸುವವರೆಲ್ಲರೂ ಈ ಉತ್ಸವವನ್ನು ಧಿಕ್ಕರಿಸಬೇಕಿದೆ.

ಆಹ್ವಾನ ಪತ್ರಿಕೆಯಲ್ಲಿ ಅನುಮತಿ ಪಡೆಯದೇ ಹೆಸರು ಬಳಸಿಕೊಂಡು ರಾಜ್ಯದ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿರುವ ಸಂಘಟಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಮೀನಾಕ್ಷಿ ಬಾಳಿ ಕಲಬುರ್ಗಿ, ಪ್ರೊ.ನಿರಂಜನಾರಾಧ್ಯ, ಡಾ.ಮೂಡ್ನಾಕೂಡ ಚಿನ್ನಸ್ವಾಮಿ, ನಾ.ದಿವಾಕರ, ಬಿ.ಶ್ರೀಪಾದ ಭಟ್, ಮಂಗ್ಳೂರ ವಿಜಯ, ಕೆ.ಪಿ.ಸುರೇಶ, ಬಸವರಾಜ ಸೂಳಿಭಾವಿ, ಕೆ.ನೀಲಾ, ಡಾ.ವಸುಂಧರ ಭೂಪತಿ, ಡಾ. ಎಚ್.ಎಸ್. ಅನುಪಮಾ, ಆರ್.ಕೆ.ಹುಡುಗಿ ಸೇರಿದಂತೆ ಪ್ರಗತಿಪರ ಚಿಂತಕರು, ಹಿರಿಯ ಸಾಹಿತಿಗಳು, ಹೋರಾಟಗಾರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ಈ ಸಮ್ಮೇಳನವು ಮಾರುವೇಶದ ಆರೆಸ್ಸೆಸ್‌ನ ದೇಶ ವಿಭಜನೆಯ ಕಾರ್ಯಕ್ರಮ ಎಂಬುದು ಸ್ಪಷ್ಟ. ಭಾರತೀಯ ಎಂದರೆ ಹಿಂದೂ, ಅದರಲ್ಲೂ ಹಿಂದೂ ಬ್ರಾಹ್ಮಣೀಯ ಸಂಸ್ಕೃತಿ ಎಂಬ ಆರೆಸ್ಸೆಸ್‌ ನ ಸಿದ್ದಾಂತ ಪ್ರಚಾರ ಮಾಡುವುದೇ ಈ ಸಮಾವೇಶದ ಉದ್ದೇಶವಾಗಿದೆ. ಆರೆಸ್ಸೆಸ್‌ ನ ನೂರನೇ ವರ್ಷದ ಆಚರಣೆಯ ಆರಂಭದ ಭಿನ್ನರೂಪ ಅಷ್ಟೇ. ದಕ್ಷಿಣ ಭಾರತದ ರಾಜ್ಯಗಳಿಗೆ ಪ್ರವೇಶದ ಭಾಗವಾಗಿ ಆರೆಸೆಸ್ಸ್ ಕರ್ನಾಟಕವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಲಬುರ್ಗಿಯನ್ನು ಹೆಬ್ಬಾಗಿಲು ಮಾಡಿಕೊಂಡಿದೆ’ ಎಂದು ಪ್ರಗತಿಪರ ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News