15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಅನ್ಯಾಯ: ಸಚಿವ ದಿನೇಶ್ ಗುಂಡೂರಾವ್

Update: 2024-02-03 13:59 GMT

ಬೆಂಗಳೂರು: ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕರ್ನಾಟಕ ಕೇಂದ್ರಕ್ಕೆ ಕೊಟ್ಟಿದ್ದಕ್ಕೂ ಪಡೆದಿದ್ದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೇಂದ್ರದ 15ನೇ ಹಣಕಾಸು ಆಯೋಗಲ್ಲಿ ಕರ್ನಾಟಕಕ್ಕೆ ಆದ ಅನ್ಯಾಯ ಬೇರೆ ಯಾವ ರಾಜ್ಯಕ್ಕೂ ಆಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಸಂಬಂಧ ʼಎಕ್ಸ್ʼ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, 14ನೇ ಹಣಕಾಸಿನಲ್ಲಿ ರಾಜ್ಯಕ್ಕೆ ಡೆವಲುಷನ್ ಫಂಡ್ ನಲ್ಲಿ ಶೇ.4.73 ರಷ್ಟು ಹಂಚಿಕೆಯಾಗುತಿತ್ತು. ಆದರೆ, ಮೋದಿ ಪ್ರಧಾನಿಯಾದ ಬಳಿಕ 15ನೇ ಹಣಕಾಸಿನಲ್ಲಿ ಕರ್ನಾಟಕಕ್ಕೆ ಶೇ.4.73 ಇದ್ದಿದ್ದನ್ನು ಶೇ.3.61ಕ್ಕೆ ಇಳಿಕೆ ಮಾಡಿಸಿದರು ಎಂದು ಹೇಳಿದ್ದಾರೆ.

ಪರಿಣಾಮ ಐದು ವರ್ಷದಲ್ಲಿ ಕರ್ನಾಟಕಕ್ಕೆ ಸಿಗಬೇಕಾಗಿದ್ದ ಸುಮಾರು 1 ಲಕ್ಷ ಕೋಟಿ ರೂ.ಪಾಲನ್ನು ತಪ್ಪಿಸಿ ಅನ್ಯಾಯ ಮಾಡಲಾಗಿದೆ. ಜಿಎಸ್.ಟಿ ಕಲೆಕ್ಷನ್‍ನಲ್ಲಿ ಮಹಾರಾಷ್ಟ್ರದ ಬಳಿಕ ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದಾಯ ತೆರಿಗೆಯಲ್ಲೂ ಕರ್ನಾಟಕ ದಿಲ್ಲಿಯನ್ನು ಹಿಂದೆ ಹಾಕಿ ಎರಡನೇ ಸ್ಥಾನ ಅಲಂಕರಿಸಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮೋದಿ ಅವರ ಪ್ರಕಾರ ಕರ್ನಾಟಕ ಅಭಿವೃದ್ಧಿ ಹೊಂದಿದ್ದೆ ತಪ್ಪಾ? ಅದಕ್ಕೆ ನಮಗೆ ಸಿಗಬೇಕಾದ ತೆರಿಗೆ ಪಾಲು ಕೊಡುತ್ತಿಲ್ಲವಾ? ದೇಶದ ಹಿಂದುಳಿದ ರಾಜ್ಯಗಳನ್ನ ಅಭಿವೃದ್ದಿಪಡಿಸಲಿ. ಆದರೆ ಕರ್ನಾಟಕದಲ್ಲಿರುವ ಹಿಂದುಳಿದ ಜಿಲ್ಲೆಗಳು ಮೋದಿ ಅವರ ಕಣ್ಣಿಗೆ ಕಾಣಲ್ವಾ? ಮೋದಿ ಅವರೇ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಪ್ರಗತಿ ಹೊಂದಿದ ರಾಜ್ಯಗಳಿಗೆ ಕೊಟ್ಟಷ್ಟು ಭಾರತದ ಆರ್ಥಿಕತೆಗೆ ಇನ್ನಷ್ಟು ಬಲ ನೀಡಲಿವೆ ಎಂಬುದನ್ನ ಅರಿಯಿರಿ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರಕಾರಕ್ಕೆ ಇಷ್ಟೊಂದು ಟ್ಯಾಕ್ಸ್ ಕಟ್ಟುವ ಕರ್ನಾಟಕ ಕಡೆಗಣಿಸಿ ಮೋದಿ ಅವರು ಸಾಧಿಸುವುದಾದರು ಏನು. ಕರ್ನಾಟಕದ ಪ್ರಗತಿಗೆ ಕಡಿವಾಣ ಹಾಕುವುದು ಮೋದಿ ಅವರ ಉದ್ದೇಶವಾ? ಇದರಿಂದ ದೇಶದ ಆರ್ಥಿಕತೆಗೆ ನಷ್ಟವಲ್ಲವೇ? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News