ನಿಯಮ ಉಲ್ಲಂಘಿಸಿ ಕಂಬಳ ಬ್ಯಾನರ್ ಅಳವಡಿಕೆ; ಆಯೋಜಕರಿಗೆ 50 ಸಾವಿರ ರೂ. ದಂಡ
Update: 2023-11-25 17:02 GMT
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಕಂಬಳ ಕ್ರೀಡಾಕೂಟ ನಡೆಸಲಾಗುತ್ತಿದ್ದು, ಈ ಸಂಬಂಧ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಕಟ್ಟಿದ ಆರೋಪದಡಿ ಬಿಬಿಎಂಪಿ ಅಧಿಕಾರಿಗಳು ಕಂಬಳ ಆಯೋಜಕರಿಗೆ ಬರೋಬ್ಬರಿ 50 ಸಾವಿರ ರೂ. ದಂಡವನ್ನು ವಿಧಿಸಿದ್ದಾರೆ.
ಬಿಬಿಎಂಪಿಯ ಜಾಹೀರಾತು ನಿಯಮವನ್ನು ಉಲ್ಲಂಘನೆ ಮಾಡಿ ಅರಮನೆ ಮೈದಾನ ಹಾಗೂ ಮೈದಾನದ ಸುತ್ತಲಿನ ಪ್ರದೇಶದಲ್ಲಿ ಬ್ಯಾನರ್, ಬಂಟಿಂಗ್ಸ್ ಹಾಗೂ ಇತರೆ ಪ್ರದರ್ಶನಾ ಫಲಕಗಳನ್ನು ಅಳವಡಿಕೆ ಮಾಡಿ ಜಾಹೀರಾತು ಕೊಡಲಾಗಿದೆ ಎನ್ನುವ ದೂರಿನ ಹಿನ್ನೆಲೆ ಬಿಬಿಎಂಪಿ ದಂಡ ವಿಧಿಸಿದೆ.
ಬೆಂಗಳೂರಿನಲ್ಲಿ ಫೈಕ್ಸ್, ಬ್ಯಾನರ್ ಅಳವಡಿಕೆಗೆ ನಿಷೇಧವಿದ್ದರೂ, ಇವುಗಳನ್ನು ಅಳವಡಿಕೆ ಮಾಡಿ ಜಾಹೀರಾತು ಪ್ರದರ್ಶನ ಮಾಡಿದ ಆರೋಪದಡಿ ಇಲ್ಲಿನ ಸದಾಶಿವನಗರ ಪೊಲೀಸ್ ಠಾಣೆಗೆ ಬಿಬಿಎಂಪಿ ದೂರು ನೀಡಲಾಗಿತ್ತು. ಆನಂತರ ಆಯೋಜಕರಿಗೆ ದಂಡ ವಿಧಿಸಿ ಬ್ಯಾನರ್ ತೆರವು ಮಾಡಲಾಗಿದೆ.