ಕಾಂಗ್ರೆಸ್ ʼಗ್ಯಾರಂಟಿʼ ಕಾರ್ಡ್ ಹಂಚದಂತೆ ಸೂಚಿಸಿ ; ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ
ಬೆಂಗಳೂರು : ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮುದ್ರಿತ ಸಹಿ ಇರುವ ಕಾಂಗ್ರೆಸ್ ʼಗ್ಯಾರಂಟಿʼ ಕಾರ್ಡ್ ಹಂಚಲು ಮುಂದಾಗಿದೆ. ಇದನ್ನು ತಡೆಯಬೇಕು ಹಾಗೂ ಕಾನೂನು ಉಲ್ಲಂಘಿಸಿ ಮತದಾರರ ವೈಯಕ್ತಿಕ ಮಾಹಿತಿ ಕಲೆ ಹಾಕದಂತೆ ಸೂಕ್ತ ನಿರ್ದೇಶನ ನೀಡಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸಿದೆ.
ಈ ಕುರಿತು ಇಂದು ಬಿಜೆಪಿ ನಿಯೋಗವು ನೃಪತುಂಗ ರಸ್ತೆಯಲ್ಲಿರುವ ಚುನಾವಣಾ ಆಯೋಗ ಕಚೇರಿಗೆ ಭೇಟಿ ನೀಡಿ ದೂರು ನೀಡಿದೆ. ಒಕ್ಕಲಿಗ ಮತದಾರರ ವಿರುದ್ಧ ಸುಳ್ಳು, ಅಸಮರ್ಪಕ ಹೇಳಿಕೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಇನ್ನೊಂದು ದೂರು ಕೊಡಲಾಗಿದೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ- ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ, ಜೀವ ಬೆದರಿಕೆ ಹಾಕುವ ಕುರಿತು ಮತ್ತೊಂದು ಮನವಿ ಗಮನ ಸೆಳೆದಿದೆ. ಕಾನೂನು- ಸುವ್ಯವಸ್ಥೆ ಕಾಪಾಡುವಂತೆ ನಿರ್ದೇಶನ ಕೊಡಬೇಕೆಂದು ಮನವಿ ಕೋರಿದೆ.
ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಪ್ರಿಯಾಂಕ್ ಖರ್ಗೆ ಅವರು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಕೆಪಿಸಿಸಿಯ ಐಟಿ, ಬಿಟಿ ವಿಭಾಗದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮತ್ತೊಂದು ಮನವಿಯಲ್ಲಿ ತಿಳಿಸಲಾಗಿದೆ.
ಮನವಿ ಸಲ್ಲಿಸುವ ನಿಯೋಗದಲ್ಲಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥನಾರಾಯಣ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಮತ್ತು ಪಕ್ಷದ ಪ್ರಮುಖರು ಇದ್ದರು.