ವಿಚಾರವಾದಿ ಮಂಟೇಲಿಂಗಯ್ಯ ಹೃದಯಾಘಾತದಿಂದ ನಿಧನ
ಮೈಸೂರು, ಆ.21: ಜನಪರ ಹೋರಾಟಗಾರ, ಅಂಬೇಡ್ಕರ್ ವಾದಿ, ವೈಚಾರಿಕ ಚಿಂತಕ, ವಿಚಾರವಾದಿ, ಕ್ರಾಂತಿಕಾರಿ ಮಂಟೇ ಲಿಂಗಯ್ಯ ರವರು ಮೈಸೂರಿನ ಸ್ವಗೃಹದಲ್ಲಿ ಸೋಮವಾರ ಸಂಜೆ ನಿಧನರಾಗಿದ್ದಾರೆ.
ಹಠಾತ್ ಹೃದಯಾಘಾತಕ್ಕೊಳಗಾದ ಹಿನ್ನಲೆಯಲ್ಲಿ ಮಂಟೇಲಿಂಗಯ್ಯರವರು ನಿಧನರಾಗಿದ್ದು, ಕೆಸರೆ ಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮೃತರ ಅಂತ್ಯ ಕ್ರಿಯೆ ಮಂಗಳವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಡ ಜನರ ಪರ ಕಾಳಜಿ ಹೊಂದಿದ್ದ ಮಂಟೇ ಲಿಂಗಯ್ಯ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮಾಡಿದವರಲ್ಲಿ ಮುಂಚೂಣಿಗರು. ಅಧಿಕಾರಸ್ತರು, ಜನಪ್ರತಿನಿಧಿಗಳು ಮತ್ತು ಆಳುವ ಸರ್ಕಾರಕ್ಕೆ ಸಿಂಹ ಸ್ವಪ್ನ ರಾಗಿದ್ದ ಅವರು ಹೋರಾಟದ ಮೂಲಕವೇ ಸಮಾಜವನ್ನು ಎಚ್ಚರಿಸಿದ್ದರು.
ಸದಾ ಕಾಲ ನೊಂದ ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದ ಅವರು ಎಜೆಎಂಎಸ್ ಸಂಘಟನೆ ಹುಟ್ಟು ಹಾಕಿ ಜನಪರ ಚಳವಳಿಯಲ್ಲಿ ಸಕ್ರಿಯರಾಗಿದ್ದರು.
ಬಡ ಜನರ ಬಗ್ಗೆ ಅವರಿಗಿದ್ದ ಕಾಳಜಿ ಎಷ್ಟಿತ್ತೆಂದರೆ ರಾಜ ವೈಭವವನ್ನು ಬಿಂಬಿಸುವ ಮೈಸೂರು ದಸರಾಕ್ಕೆ ಪ್ರತಿಯಾಗಿ ಬಡವರ ದಸರಾವನ್ನು ಅದ್ದೂರಿಯಾಗಿ ಆಚರಿಸಿ ರಾಜ್ಯದ ಗಮನ ಸೆಳೆದಿದ್ದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದ ಅವರು ಅಂಬೇಡ್ಕರ್ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ಸದಾ ಕಾಲ ತಲುಪಿಸುತ್ತಿದ್ದರು, ಅಂಬೇಡ್ಕರ್ ವಿಚಾರವಾಗಿ ಗಂಟೆಗಟ್ಟಲೆ ಭಾಷಣ ಮಾಡುತ್ತಿದ್ದರು. ರಾಜ್ಯದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿ ಅಂಬೇಡ್ಕರ್ ವಿಚಾರಧಾರೆ ಜೊತೆಗೆ ಪ್ರಗತಿಪರ ಚಿಂತನೆಯ ಕಿಚ್ಚು ಹಚ್ಚಿದ್ದರು.
ವೈಜ್ಞಾನಿಕ ಮನೋಭಾವನೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಅವರು ಹಿಂದೂ ಧರ್ಮದಲ್ಲಿನ ಮೌಢ್ಯದ ವಿರುದ್ಧ ಸಮರವನ್ನೇ ಸಾರಿದ್ದರು, ಯಾವಾಗಲೂ ಮೌಢ್ಯದ ವಿರುದ್ಧ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುತ್ತಿದ್ದ ಅವರು ಮೌಡ್ಯ ತೊರೆದು ಅಂಬೇಡ್ಕರ್ ಚಿಂತನೆಯ ಹಾದಿಯಲ್ಲಿ ಮುನ್ನಡೆಯುವಂತೆ ಜನಸಮೂಹವನ್ನು ಪ್ರೇರಣೆ ಮಾಡುತ್ತಿದ್ದರು. ಬಹುಜನ ಚಳುವಳಿಯನ್ನು ಕನ್ನಡ ನಾಡಿಗೆ ಪರಿಚಯಿಸಿದ್ದ ಅವರು ಬಹುಜನ ಸಮಾಜ ಪಕ್ಷವನ್ನು ಕರ್ನಾಟಕಕ್ಕೆ ತಂದಿದ್ದರು, ರಾಜಕಾರಣ ಆಷಾಢ ಭೂತಿತನ ಅವರಿಗೆ ಇಷ್ಟವಿಲ್ಲದ ಹಿನ್ನೆಲೆಯಲ್ಲಿ ಅವರು ರಾಜಕಾರಣದಿಂದ ಹಿಂದೆ ಸರಿದಿದ್ದರು.
ಕ್ರಾಂತಿಕಾರಿ ಮನೋಭಾವದ ಹುಟ್ಟು ಹೋರಾಟಗಾರ ಮಂಟೇ ಲಿಂಗಯ್ಯರವರ ಅಗಲಿಕೆ ಕನ್ನಡ ನಾಡಿಗೆ ದೊಡ್ಡ ನಷ್ಟವನ್ನುಂಟು ಮಾಡಿದೆ.
ಸಚಿವ ಎಚ್.ಸಿ . ,ಹದೇವಪ್ಪ ಸಂತಾಪ:
'ಮೈಸೂರಿನ ಕ್ರಾಂತಿಕಾರಿ ದಲಿತ ಹೋರಾಟಗಾರ ಶ್ರೀ ಮಂಟೇಲಿಂಗಯ್ಯ ಅವರು ನಮ್ಮನ್ನು ಅಗಲಿದ್ದು ಅವರಿಗೆ ನನ್ನ ಭಾವಪೂರ್ಣ ನಮನಗಳು. ಬದ್ಧತೆಯ ಹೋರಾಟಗಾರರ ಅಗಲಿಕೆಯು ಆರೋಗ್ಯಕರ ಸಮಾಜಕ್ಕೆ ಆಗುವ ಬಹುದೊಡ್ಡ ನಷ್ಟ. ಇವರ ಅಗಲಿಕೆಯ ನೋವು ಭರಿಸುವ ಶಕ್ತಿಯು ಅವರ ಕುಟುಂಬ ವರ್ಗದವರಿಗೆ ದೊರೆಯಲಿ ಎಂದು ಈ ವೇಳೆ ಪ್ರಾರ್ಥಿಸುತ್ತೇನೆ'
- ಎಚ್.ಸಿ . ,ಹದೇವಪ್ಪ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ