ಇನ್ವೆಸ್ಟ್ ಕರ್ನಾಟಕ | ಜರ್ಮನಿಯಲ್ಲಿ ಯಶಸ್ವಿ ರೋಡ್ ಶೋ

Update: 2024-12-07 14:42 GMT

ಬೆಂಗಳೂರು : ರಾಜ್ಯದಲ್ಲಿ ತಯಾರಿಕಾ ಘಟಕ ಸ್ಥಾಪಿಸಲು ಜರ್ಮನಿಯ ಇಂಡೆಕ್ಸ್ ವೆರ್ಕೆ ಮತ್ತು ತನ್ನ ತಯಾರಿಕಾ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಮುಂದಾಗಲು ಬಾಷ್ ಕಂಪೆನಿಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಶನಿವಾರ ಆಹ್ವಾನ ನೀಡಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ’ಕ್ಕೆ ಹೂಡಿಕೆದಾರರನ್ನು ಆಹ್ವಾನಿಸಲು ರಾಜ್ಯದ ಉನ್ನತ ಮಟ್ಟದ ನಿಯೋಗದ ಜೊತೆ ಜರ್ಮನಿ ಪ್ರವಾಸದಲ್ಲಿ ಇರುವ ಸಚಿವ ಪಾಟೀಲ್, ರಾಜ್ಯದಲ್ಲಿ ಉದ್ಯಮ ಸ್ಥಾಪನೆ, ಬಂಡವಾಳ ಹೂಡಿಕೆ ಹಾಗೂ ತಯಾರಿಕೆ ಸಾಮರ್ಥ್ಯ ಹೆಚ್ಚಿಸುವುದರ ಪ್ರಯೋಜನಗಳನ್ನು ಅಲ್ಲಿನ ಪ್ರಮುಖ ಉದ್ದಿಮೆಗಳು ಮತ್ತು ವಾಣಿಜ್ಯ ಸಂಘಟನೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಭಾರತದ ಮಷಿನ್‍ಟೂಲ್ಸ್ ವಲಯದಲ್ಲಿ ಶೇ.52ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಕರ್ನಾಟಕದಲ್ಲಿ ತನ್ನ ತಯಾರಿಕಾ ಘಟಕ ಆರಂಭಿಸಬೇಕು. ತುಮಕೂರು ಮಷಿನ್‍ಟೂಲ್ ಪಾರ್ಕ್‍ನಲ್ಲಿ ಲಭ್ಯ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಇಂಡೆಕ್ಸ್ ವೆರ್ಕೆ ಕಂಪನಿಗೆ ಸಚಿವರು ಇದೇ ವೇಳೆ ಮನವಿ ಮಾಡಿಕೊಂಡಿದ್ದಾರೆ.

ಕಂಪ್ಯೂಟರ್ ಸಾಫ್ಟ್‌ವೇರ್ ನೆರವಿನಿಂದಲೇ ಕಾರ್ಖಾನೆಗಳ ಯಂತ್ರೋಪಕರಣಗಳ ನಿರ್ವಹಣೆಯಲ್ಲಿನ (ಸಿಎನ್‍ಸಿ ಮಷಿನಿಂಗ್) ಜಾಗತಿಕ ಪ್ರಮುಖ ಕಂಪನಿ ಇಂಡೆಕ್ಸ್-ವೆರ್ಕೆ ತಯಾರಿಕಾ ಘಟಕಕ್ಕೆ ರಾಜ್ಯದ ನಿಯೋಗದ ಜೊತೆ ಭೇಟಿ ನೀಡಿದ್ದ ಸಚಿವರು ಈ ಆಹ್ವಾನ ನೀಡಿದ್ದಾರೆ. ಬಾಷ್‌ ಕಂಪೆನಿಯ ಪ್ರಮುಖರ ಜೊತೆಗಿನ ಭೇಟಿಯಲ್ಲಿ ಸಚಿವರು ಬೆಂಗಳೂರಿನಲ್ಲಿ ಕಂಪೆನಿಯು ಹೊಂದಿರುವ ವಹಿವಾಟನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ರಾಜ್ಯದ ಇತರ ಭಾಗಗಳಲ್ಲೂ ಕಂಪೆನಿಯು ತನ್ನ ತಯಾರಿಕಾ ಚಟುವಟಿಕೆ ವಿಸ್ತರಿಸಲು ಪೂರಕ ವಾತಾವರಣ ಇರುವುದನ್ನು ಮನದಟ್ಟು ಮಾಡಿಕೊಟ್ಟರು.

ಜರ್ಮನಿಯ ಪ್ರಮುಖ ವಾಣಿಜ್ಯೋದ್ಯಮ ಸಂಘಟನೆಗಳಲ್ಲಿ ಒಂದಾಗಿರುವ 1,60,000 ಉದ್ದಿಮೆಗಳನ್ನು ಪ್ರತಿನಿಧಿಸುವ ಐಎಚ್‍ಕೆ ಸ್ಟುಟ್‍ಗಾರ್ಟ್ ಜೊತೆಗಿನ ಸಮಾಲೋಚನೆಯಲ್ಲಿ ಕರ್ನಾಟಕವು ಜಾಗತಿಕ ಬಂಡವಾಳ ಹೂಡಿಕೆಯ ಮೆಚ್ಚಿನ ತಾಣವಾಗಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ರಾಜ್ಯದಲ್ಲಿ ವಹಿವಾಟು ಆರಂಭಿಸಲು ಲಭ್ಯ ಇರುವ ಪೂರಕ ವಾತಾವರಣವನ್ನು ವಿವರಿಸಲಾಗಿದೆ.

ಜರ್ಮನಿಯಲ್ಲಿ ನಡೆದ ರೋಡ್ ಶೋದಲ್ಲಿ, ಕರ್ನಾಟಕವು ಬಂಡವಾಳ ಹೂಡಿಕೆಯ ಜಾಗತಿಕ ಆಕರ್ಷಕ ತಾಣವಾಗಿರುವುದು ಸೇರಿದಂತೆ ರಾಜ್ಯದಲ್ಲಿನ ಸದೃಢ ಮೂಲಸೌಲಭ್ಯ, ನಾವೀನ್ಯತೆ ಆಧಾರಿತ ಉಪಕ್ರಮಗಳು ಮತ್ತು ಹೂಡಿಕೆದಾರ ಸ್ನೇಹಿ ನೀತಿಗಳನ್ನು ಸ್ಥಳೀಯ ಉದ್ಯಮಗಳ ಪ್ರಮುಖರಿಗೆ ಯಶಸ್ವಿಯಾಗಿ ಮನದಟ್ಟು ಮಾಡಿಕೊಡಲಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ ಸಮಾಲೋಚನೆಗಳಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News