ಶೂದ್ರರು ಕಾಲಿನಲ್ಲಿ ಹುಟ್ಟಿದ್ದು ಎನ್ನುವ ಸನಾತನ ಧರ್ಮ ಒಪ್ಪಲು ಸಾಧ್ಯವೇ?: ಕೇರಳದ ಮಾಜಿ ಸಚಿವೆ ಶೈಲಜಾ ಟೀಚರ್

Update: 2023-09-05 16:39 GMT

ಬೆಂಗಳೂರು, ಸೆ.5:ಬ್ರಾಹ್ಮಣರು ತಲೆಯಲ್ಲಿ ಹುಟ್ಟಿದವರು, ಶೂದ್ರರು ಕಾಲಿನಲ್ಲಿ ಹುಟ್ಟಿದ್ದು ಎನ್ನುವ ಸನಾತನ ಧರ್ಮವನ್ನು ಒಪ್ಪಲು ಸಾಧ್ಯವೇ ಎಂದು ಕೇರಳದ ಮಾಜಿ ಸಚಿವೆ ಶೈಲಜಾ ಟೀಚರ್ ಪ್ರಶ್ನೆ ಮಾಡಿದ್ದಾರೆ.

ಮಂಗಳವಾರ ನಗರದ ಪುರಭವನ ಸಭಾಂಗಣದಲ್ಲಿ ನಮ್ಮೆಲ್ಲರ ನಲ್ಮೆಯ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಅಗಲಿಯ ಆರು ವರ್ಷಗಳ ನೆನಪಿನಲ್ಲಿ ಗೌರಿ ಸ್ಮಾರಕ ಟ್ರಸ್ಟ್ ಆಯೋಜಿಸಿದ್ದ "ಸರ್ವಾಧಿಕಾಲದ ಹೊತ್ತಲ್ಲಿ ದೇಶವನ್ನು ಮರುಕಟ್ಟುವ ಕಲ್ಪನೆ" ಕುರಿತ ಸಂವಾದದಲ್ಲಿ ಮಾತನಾಡಿದ ಅವರು,ಜಾತ್ಯಾತೀತತೆ ನಮ್ಮ ಸಂವಿಧಾನ, ವಿವಿಧೆತೆಯಲ್ಲಿ ಏಕತೆ ನಮ್ಮ ವೇದ ವಾಕ್ಯವಾಗಿದೆ. ಆದರೆ, ಸಂಘಪರಿವಾರ ಇದನ್ನು ಒಪ್ಪುವುದಿಲ್ಲ ಎಂದು ಹೇಳಿದರು.

ಇನ್ನೂ, ಈ ಸನಾತನ ಧರ್ಮ ಎಂದರೇನು?. ಅದನ್ನು ಖಂಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ಸಂಘಪರಿವಾರದ ಸನಾತನ ಧರ್ಮವೇ ಬೇರೆ. ದೇವರೇ ಚಾತುರ್ವರ್ಣ ರಚಿಸಿದ್ದಾನೆ ಎನ್ನುತ್ತಾರೆ. ಬ್ರಾಹ್ಮಣರು ತಲೆಯಲ್ಲಿ ಹುಟ್ಟಿದವರು, ವಿದ್ಯೆ ಅವರಿಗೆ ಎನ್ನುವುದನ್ನು ನಾವು ಒಪ್ಪಲು ಸಾಧ್ಯವೇ? ಶೂದ್ರರು ಕಾಲಿನಲ್ಲಿ ಹುಟ್ಟಿದ್ದು ಎನ್ನುವುದನ್ನು ಒಪ್ಪಲು ಸಾಧ್ಯವೇ? ಎಂದು ಅವರು ಕೇಳಿದರು.

ಅಸಹಿಷ್ಣುತೆ ಈ ದೇಶವನ್ನು ಆಳುತ್ತಿದೆ. ಬಾಬಾ ಸಾಹೇಬರ ನೇತೃತ್ವದಲ್ಲಿ ರಚಿತವಾದ ಸಂವಿಧಾನವನ್ನು ಇಪ್ಪತ್ತು ವರ್ಷಗಳ ನಂತರವೂ ಕಾಪಾಡಿಕೊಳ್ಳಬೇಕಾದ ಸ್ಥಿತಿ ಬಂದಿದೆ. ಇನ್ನೂ, ಕೋವಿಡ್ ಸಮಯದಲ್ಲಿ ಗೋವಿನ ಗಂಜಲ ಸವರಿಕೊಳ್ಳಿ ಎಂದು ಕರೆ ನೀಡಿದ್ದರು. ಇದರಿಂದಲೇ ನಮ್ಮ ದೇಶ ಈ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದನ್ನು ನೋಡಬಹುದಾಗಿದೆ. ಹೀಗಾಗಿ, ದೇಶ, ಪ್ರಜಾಪ್ರಭುತ್ವ, ಜಾತ್ಯತೀಯತೆಯನ್ನು ಉಳಿಸಿಕೊಳ್ಳು ಗೌರಿ ಲಂಕೇಶ್ ಅವರಂತೆ ಹೋರಾಟ ನಡೆಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ಹಿರಿಯ ಪತ್ರಕರ್ತೆ ಸುಪ್ರಿಯಾ ಶ್ರೀನಟೆ ಮಾತನಾಡಿ, ಕೆಲವರಿಗೆ ಇಂಡಿಯಾ ಎಂಬ ಪದವನ್ನೇ ಕೇಳಲು ಸಾಧ್ಯವಿಲ್ಲ. ಇಂಡಿಯಾ ಎಂಬ ಹೆಸರು ಸಂವಿಧಾನದಿಂದ ದೊರಕಿದ್ದು, ಇದನ್ನು ಇಂದು ಭಾರತ್ ಎಂದು ಬದಲಿಸುವ ಪ್ರಯತ್ನ ನಡೆಯುತ್ತಿದೆ. ಇಂದಿನ ಜಿ20 ಸಮಾವೇಶದಲ್ಲೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅದನ್ನೆ ಪುನರುಚ್ಛರಿಸಿದ್ದು, ಇದನ್ನು ಒಪ್ಪಲಾಗದುಎಂದು ಹೇಳಿದರು.

ದೇಶದ ಹೆಸರನ್ನು ಬದಲಿಸಲು ಯತ್ನಿಸುತ್ತಿರುವವರ ಪೂರ್ವಜರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ, ದೇಶ ಕಟ್ಟಲು ಶ್ರಮಿಸಲಿಲ್ಲ ಎಂದ ಅವರು, ನಾನು ನೀವು ಎಲ್ಲರೂ ಸೇರಿ ನಮ್ಮ ಪೂರ್ವಜರು ಕನಸು ಕಂಡ ದೇಶ ಕಟ್ಟಲು ಪ್ರಯತ್ನಿಸಬೇಕು. ಭರವಸೆ ತರಬೇಕು. ನಾವು ಹಲವು ಧರ್ಮಗಳನ್ನು ಪಾಲಿಸುತ್ತೇವೆ. ಆದರೆ ಅದಕ್ಕಿಂತ ಪವಿತ್ರವಾದದ್ದು, ಸಂವಿಧಾನ ಆಗಿದ್ದು, ಇದನ್ನು ರಕ್ಷಣೆ ಮಾಡಬೇಕಾಗಿದೆ ಎಂದು ಕರೆ ನೀಡಿದರು.

ಮಣಿಪುರದ ಸಾಮಾಜಿಕ ಹೋರಾಟಗಾರ್ತಿ ಏಂಜೆಲಾ ರಂಗದ್ ಮಾತನಾಡಿ, ಈಶಾನ್ಯ ಭಾರತದಲ್ಲಿ ಶೋಷಿತರನ್ನು ಮತ್ತಷ್ಟು ದಮನ ಮಾಡಲಾಗುತ್ತಿದೆ. ಅಲ್ಲಿನ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸುವ ಅಗತ್ಯತೆ ಎಲ್ಲರಿಗೂ ಇದೆ ಎಂದು ನುಡಿದರು.

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಾಲ್ಪೆ ಮಾತನಾಡಿ, ದೇಶದಲ್ಲಿ ಹಲವು ಜಾತಿ,ಧರ್ಮ, ಪಂಗಡಗಳಿದ್ದರೂ ಅವರ ಧರ್ಮ ಅನುಸರಿಸುವ, ಪ್ರಚಾರ ಮಾಡುವ ಹಕ್ಕು ಕಲ್ಪಿಸಿದೆ. ಆದರೆ, ಅದು ಇನ್ನೊಬ್ಬರ ಮನಸ್ಸಿಗೆ ನೋವು ಮಾಡುವಂತಿರಬಾರದು, ಬೇರೆ ಧರ್ಮವನ್ನು ವಿರೋಧಿಸುವಂತಿರಬಾರದು. ಅಲ್ಲದೇ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ತನಗಿಷ್ಟವಾದ ಧರ್ಮ ಅನುಸರಿಸಲಿ, ಇಷ್ಟವಾದ ದೇವರನ್ನು ಆರಾಧಿಸಲು ಹಕ್ಕು ನೀಡಿದೆ. ಇಂತಹ ಮೌಲ್ಯಯುತ ಸಂವಿಧಾನ ವಿಶ್ವದಲ್ಲಿ ಎಲ್ಲೂ ಇಲ್ಲ. ಈ ಸಂವಿಧಾನದ ಮೇಲೆ ಪ್ರಮಾಣ ಮಾಡಿ ಬದಲಾವಣೆಗೆ ಪ್ರಯತ್ನ ನಡೆಸಿರುವುದು ವಿಪರ್ಯಾಸ ಎಂದು ಹೇಳಿದರು.

ಸಂವಾದದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರಿ ದಿನದ ನೆನಪಿನಲ್ಲಿ ನ್ಯಾಯಪಥ ವಿಶೇಷ ಸಂಚಿಕೆ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್, ಬಹುಭಾಷ ನಟ ಪ್ರಕಾಶ್ ರಾಜ್, ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ಗೌರಿ ಲಂಕೇಶ್ ಅವರ ತಾಯಿ ಇಂದಿರಾ ಲಂಕೇಶ್, ಸಹೋದರಿ, ಸಿನೆಮಾ ನಿರ್ದೇಶಕಿ ಕವಿತಾ ಲಂಕೇಶ್, ಮಾಜಿ ಸಚಿವ ಎಚ್.ಆಂಜನೇಯ, ಹೋರಾಟಗಾರ ಕೆ.ಎಲ್.ಅಶೋಕ್, ಸಿನೆಮಾ ನಿರ್ದೇಶಕ ದೀಪು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

 

ಗೌರಿಯಂತೆ ಮಾತನಾಡಬೇಡ ಎನ್ನುತ್ತಾಳೆ ಮಗಳು:ಕವಿತಾ ಲಂಕೇಶ್

ʼಗೌರಿ ಲಂಕೇಶ್ ಅವರಂತೆ ಮಾತನಾಡಬೇಡ, ಸಾಮಾಜಿಕ ಜಾಲತಾಣಗಳಲ್ಲೂ ಪ್ರತಿಕ್ರಿಯಿಸಬೇಡ ಎಂದು ಮಗಳು ಹೇಳುತ್ತಾಳೆ. ಅಷ್ಟರ ಮಟ್ಟಿಗೆ ಭಯ ಆವರಿಸಿಕೊಂಡಿದೆ. ಎಲ್ಲಿ ನೋಡಿದರೂ ಸುಳ್ಳು ಸುದ್ದಿಗಳದ್ದೇ ಹಾವಳಿ ಇದೆ. ಮನೆ ಅಕ್ಕಪಕ್ಕದವರೂ ಇಸ್ಲಾಮೋಫೋಬಿಯಾ ಸುದ್ದಿಗಳನ್ನು ಹರಡಿ ಶಾಂತ ವಾತಾವರಣವನ್ನೆ ಹಾಳು ಮಾಡುವ ಸ್ಥಿತಿಗೆ ತಲುಪಿದ್ದಾರೆʼ

-ಕವಿತಾ ಲಂಕೇಶ್, ಸಿನೆಮಾ ನಿರ್ದೇಶಕಿ

 

 

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News