ಪ್ರಾಸಿಕ್ಯೂಷನ್ ರದ್ದು ಕೋರಿ ಸಿಎಂ ಸಲ್ಲಿಸಿದ್ದ ಅರ್ಜಿ | ಸೆ.9ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್
ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸೆ.9ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಇದೇ ವೇಳೆ ಹೈಕೋರ್ಟ್ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿದ್ದು, ಸಿಎಂ ಸಿದ್ದರಾಮಯ್ಯಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ರಾಜ್ಯಪಾಲ ಪ್ರಾಸಿಕ್ಯೂಷನ್ ಗೆ ಅನುಮತಿ ರದ್ದು ಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ ರಾಘವನ್ ಸುದೀರ್ಘ ವಾದವನ್ನು ಮಂಡಿಸಿದರು. ಮನವಿ ಸಲ್ಲಿಸದೆಯೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬಹುದು ಎಂದು ವಾದಿಸಿದರು. ಮುಡಾ ಹಗರಣದ ಬಗ್ಗೆ ತನಿಖೆಗೆ ಆಯೋಗ ರಚನೆಯಾಗಿದೆ. ಆಯೋಗದ ರಚನೆಯ ಬಗ್ಗೆ ನಿಮಗೆ ಸಮಾಧಾನವಿದೆಯೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
ಸರ್ಕಾರವೇ ತನಿಖೆ ಅಗತ್ಯವಿದೆ ಎಂದು ಭಾವಿಸಿ ಆಯೋಗ ರಚನೆ ಮಾಡಿದೆ. ಹೀಗಾಗಿ ರಾಜ್ಯಪಾಲರು 17 ಎ ಅಡಿ ಅನುಮತಿ ನೀಡಿರುವುದು ಸರಿಯಾಗಿದೆ. ಈ ಹಂತದಲ್ಲಿ ತನಿಖೆಯನ್ನು ತಡೆಹಿಡಿಯಬಾರದು. ಸತ್ಯ ಅನಾವರಣಗೊಳ್ಳಲು ಅವಕಾಶ ನೀಡಬೇಕು ಎಂದು ದೂರುದಾರರ ಪರ ಕೆ ಜಿ ರಾಘವನ್ ವಾದ ಮಂಡಿಸಿದರು.
ಡಿನೋಟಿಫೈ ಆದ ಜಮೀನಿನಲ್ಲಿ ನಿವೇಶನ ಹಂಚಿಕೆಯಾಗಿತ್ತು. 2010ರಲ್ಲಿ ಈ ಜಮೀನು ಮಲ್ಲಿಕಾರ್ಜುನ್ ಸಿಎಂ ಪತ್ನಿಗೆ ದಾನವಾಗಿ ನೀಡಿದ್ದರು. ಈ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಬದಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದರು. ಸಾಮಾನ್ಯ ಪ್ರಜೆಯಾಗಿದ್ದರೆ ಬದಲಿ ನಿವೇಶನ ನೀಡುತ್ತಿರಲಿಲ್ಲ. ನಿಮ್ಮ ಮಾಲೀಕತ್ವ ಸಾಬೀತುಪಡಿಸಿ ಎಂದು ಕೇಳುತ್ತಿದ್ದರು ಎಂದು ಕೆಜಿ ರಾಘವನ್ ವಾದಿಸಿದರು.
1998ರ ಭೂ ಸ್ವಾಧೀನಕ್ಕೆ 2015ರ ನೋಟಿಫಿಕೇಶನ್ ಅನ್ವಯಿಸಿದ್ದಾರೆ. ಮಾಲೀಕರೇ ಅಲ್ಲದವರಿಗೆ ಡಿನೋಟಿಫಿಕೇಶನ್ ಮಾಡಿದ್ದಾರೆ. ಕಡಿಮೆ ಬೆಲೆಯ ಜಮೀನಿಗೆ ಅತಿ ಹೆಚ್ಚಿನ ಪರಿಹಾರ ನೀಡಿದ್ದಾರೆ. ತನಿಖೆ ನಡೆಸಲು ಇನ್ನೆಷ್ಟು ಸಂಗತಿಗಳು ಬೇಕು? ಸಿಎಂ ಮತ್ತು ಈ ಘಟನೆಗೂ ಸಂಬಂಧವೇನು ಎಂಬ ಪ್ರಶ್ನೆ ಕೇಳಿದ್ದಾರೆ. ಮುಡಾ ಸೈಟ್ ಪಡೆಯುವಾಗ ಸಿದ್ದರಾಮಯ್ಯ ಅವರ ಮೇಲೆ ಪ್ರಭಾವ ಬಳಸಿರುವ ಆರೋಪವಿದೆ. ಅಧಿಕಾರ ದುರುಪಯೋಗವೂ ಆಗಿದೆ. ಈ ಕುರಿತು ತನಿಖೆ ಅವಶ್ಯಕತೆ ಇದೆ. ಸಿಎಂ ಪತ್ನಿಗಾಗಿ ನಿಯಮಗಳನ್ನು ಬದಲಾಯಿಸಿಕೊಂಡಿದ್ದಾರೆ. ಒಂದು ಸೈಟಿಗೂ ಅರ್ಹತೆ ಇಲ್ಲದವರಿಗೆ 14 ಸೈಟ್ ನೀಡಲಾಗಿದೆ. ಎಲ್ಲಾ ಘಟನೆ ನಡೆದಾಗ ಸಿದ್ದರಾಮಯ್ಯ ಡಿಸಿಎಂ ಅಥವಾ ಸಿಎಂ ಆಗಿದ್ದರು ಎಂದು ಕೆಜಿ ರಾಘವನ್ ವಾದಿಸಿದರು.
ಇದೆ ವೇಳೆ ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡುವಂತೆ ಎಜಿ ಶಶಿಕಿರಣ್ ಶೆಟ್ಟಿ ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶರು ಹಬ್ಬಕ್ಕೂ ಮೊದಲು ವಾದ ಮಂಡನೆ ಮುಗಿಸಿಬಿಡಿ ಎಂದರು. ಸಚಿವ ಸಂಪುಟದ ನಿರ್ಣಯದ ಬಗ್ಗೆ ವಾದ ಮಂಡಿಸಬೇಕಿದೆ. ಅಡ್ವಕೇಟ್ ಜನರಲ್ ಅಭಿಪ್ರಾಯದ ಬಗ್ಗೆಯೂ ವಾದಿಸಬೇಕಿದೆ. ಒಂದು ವಾರ ಕಾಲಾವಕಾಶ ನೀಡಿ ಎಂದು ಎಜೆ ಶಶಿಕಿರಣ್ ಶೆಟ್ಟಿ ನ್ಯಾಯಾಧೀಶರಿಗೆ ಮನವಿ ಮಾಡಿದರು. ಹೀಗಾಗಿ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 9 ಕ್ಕೆ ಮುಂದೂಡಿದರು.