ಎಲ್ಲರ ಧಾರ್ಮಿಕ ಭಾವನೆಗಳನ್ನು ಗೌರವಿಸುವುದು ನಮ್ಮ ಜವಾಬ್ದಾರಿ: ಯು.ಟಿ.ಖಾದರ್
ಬೆಂಗಳೂರು: ನಮ್ಮ ಬ್ಲಾಕಿನ ಅಧ್ಯಕ್ಷರು ಅವರ ಧಾರ್ಮಿಕ ಭಾವನೆಗಳಿಗೆ ಅನುಗುಣವಾಗಿ ಒಂದು ಹರಕೆಯನ್ನು ಇಟ್ಟಿದ್ದರು. ಅವರ ಹರಕೆಗೆ ಗೌರವ ನೀಡುವುದು, ಕೋಲಕ್ಕೆ ಹೋಗುವುದು ನಮ್ಮ ಸಂಸ್ಕೃತಿ. ಯಾರೋ ಒಬ್ಬ ಸಾಮಾಜಿಕ ಜಾಲತಾಣದಲ್ಲಿ ಗೀಚಿದರೆ, ನೂರು ಜನ ನನ್ನ ನಡೆಯನ್ನು ಒಪ್ಪಿದ್ದಾರೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಬಂಟ್ವಾಳ ತಾಲೂಕಿನ ಪನೋಲಿಬೈಲ್‍ನಲ್ಲಿ ನಡೆದ ಕೋಲದಲ್ಲಿ ಭಾಗವಹಿಸಿದ್ದ ಯು.ಟಿ.ಖಾದರ್ ನಡೆಯನ್ನು ಖಂಡಿಸಿ ಸಾಲೆತ್ತೂರು ಫೈಝಿ ಅಲ್ ಹಮ್ದಾನಿ ಎಂಬವರು ಫೇಸ್‍ಬುಕ್‍ನಲ್ಲಿ ಹಾಕಿರುವ ಪೋಸ್ಟ್ ಕುರಿತು ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಪ್ರತಿಕ್ರಿಯಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಗೀಚುವವರನ್ನು ಇತಿಹಾಸ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಪ್ರಶ್ನೆ ಕೇಳುವವರನ್ನು ಇತಿಹಾಸ ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ. ಯಾರು ಕೆಲಸ ಮಾಡುತ್ತಾರೆ, ಯಾರು ಉತ್ತರ ಕೊಡುತ್ತಾರೋ ಅವರನ್ನು ಮಾತ್ರ ಇತಿಹಾಸ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ಖಾದರ್ ಹೇಳಿದರು.
ಆದುದರಿಂದ, ಆ ಒಬ್ಬನಿಗೆ ಯಾಕೆ ಮಹತ್ವ ನೀಡಬೇಕು. ಅದರ ಅಗತ್ಯವು ಇಲ್ಲ. ಶೇ.99ರಷ್ಟು ಜನರು ಎಲ್ಲ ಧರ್ಮಗಳಿಗೆ ಗೌರವ ನೀಡುತ್ತಾ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ ಎಂದು ಖಾದರ್ ತಿಳಿಸಿದರು.