ಬಿಜೆಪಿಯಲ್ಲಿ ಅಸಮಧಾನ ಇರುವುದು ಸತ್ಯ: ಬಿ.ವೈ.ವಿಜಯೇಂದ್ರ

Update: 2023-11-20 14:58 GMT

ಮೈಸೂರು,ನ.20: ಬಿಜೆಪಿಯಲ್ಲಿ ಅಸಮಧಾನ‌ ಇರುವುದು ಸತ್ಯ. ರಾಜ್ಯಾಧ್ಯಕ್ಷನಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕೆಲಸವನ್ನು ನಾನು ಮಾಡುತ್ತೇನೆ ಎಂದು ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಮೈಸೂರು ನಗರ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ದೊಡ್ಡ ಮಟ್ಟದ ಅಸಮಾಧಾನ ಇಲ್ಲ. ಸಣ್ಣಪುಟ್ಟ ಅಸಮಾಧಾನ ಸಹಜ. ಬಸವವನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿ‌ಹೊಳಿ, ಅರವಿಂದ್ ಬೆಲ್ಲದ್ ಅವರು ಕೂಡ ತಮ್ಮ ಅಭಿಪ್ರಾಯ ತಿಳಿಸಿದ ನಂತರವಷ್ಟೇ ಬಿಜೆಪಿ ಸಭೆಯಿಂದ ಹೊರ ನಡೆದಿದ್ದಾರೆ. ಅವರೆಲ್ಲರೂ ನಮ್ಮ ಪಕ್ಷದ ಹಿರಿಯ ನಾಯಕರು. ಅವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತೇನೆ. ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರನ್ನು ಬಿಜೆಪಿಗೆ ಕರೆ ತರಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಝಮೀರ್ ಅಹಮ್ಮದ್ ಅವರುಗಳ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದ ಅವರು, ಪ್ರಿಯಾಂಕ್ ಖರ್ಗೆ ಅವರ ನಡವಳಿಕೆ ನೋಡಿದರೆ ಅಧಿಕಾರದಲ್ಲಿ ಶಾಶ್ವತವಾಗಿ ಇರುತ್ತೇವೆಂಬ ಭ್ರಮೆಯಲ್ಲಿದ್ದಾರೆ. ಅವರ ಕ್ಷೇತ್ರ ಗುಲ್ಬರ್ಗ ಜಿಲ್ಲೆಯಲ್ಲಿ ಗುಂಡಾಗಿರಿ ಶುರುವಾಗಿದ್ದು, ಅಕ್ಕ- ಪಕ್ಕ ಜಿಲ್ಲೆ ಸೇರಿ ಇಡೀ ರಾಜ್ಯಕ್ಕೆ ಬರುವಂತಹ ದಿನಗಳಲ್ಲಿ ಇದು ವ್ಯಾಪಿಸಲಿದೆ. ಮೊನ್ನೆ ನಮ್ಮ ಕಾರ್ಯಕರ್ತ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಕಡಿಮೆ ಅಂತರದಲ್ಲಿ ಸೋತಿರುವ ಮಣಿಕಂಠ ರಾಥೋಡ್ ಅವರ ಮೇಲೆ ಗುಂಡಾಗಳನ್ನು ಬಿಟ್ಟು ರಾತ್ರೋರಾತ್ರಿ ಹಲ್ಲೆ ಮಾಡಿಸಿದ್ದಾರೆ. ಇಂತಹವರಿಂದ ಜನರು ಇನ್ನೇನೂ ನಿರೀಕ್ಷಿಸಲು ಸಾಧ್ಯ. ಈ ಕೂಡಲೇ ಸಿದ್ದರಾಮಯ್ಯ ಅವರು ಅವರ ರಾಜೀನಾಮೆ ಪಡೆಬೇಕೆಂದು ಆಗ್ರಹಿಸಿದರು.

ಚುನಾವಣೆ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರು ಹೇಳುತ್ತಾರೆ. ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಆದರೆ ಸಚಿವರಾದ ಜಮೀರ್ ಅಹಮ್ಮದ್ ಅವರು ಎನೂ ಹೇಳಿದ್ದಾರೆ. ಪಕ್ಕದ ತೆಲಂಗಾಣ ರಾಜ್ಯದ ಚುನಾವಣಾ ಸಂದರ್ಭದಲ್ಲಿ ನೀಡಿರುವ ಹೇಳಿಕೆಯನ್ನು ಪುನರ್ ಉಚ್ಚರಿಸಲು ಹೋಗಲ್ಲ. ಅವರು ಹೇಳಿರುವ ಮಾತು ಸಂವಿಧಾನದ ಬಗ್ಗೆ. ಪ್ರಜಾಪ್ರಭುತ್ವ, ಸಂವಿಧಾನ ಮತ್ತು ದಲಿತ ವಿರೋಧಿ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತದೆ‌. ಅವರ ಅಂತರಾಳದಿಂದ ಬಂದ ಮಾತುಗಳನ್ನು ಹುಡುಗಾಟಕ್ಕೆ ತೆಗೆದುಕೊಳ್ಳಬೇಕ. ಪ್ರಜಾಪ್ರಭುತ್ವ ದ ದೇಗುಲ ವಿಧಾನ ಸಭಾ ಒಳಗೆ ನ್ಯಾಯದೇವತೆಗೂ ಸಹ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಇದೆಲ್ಲವನ್ನೂ ಖಂಡನೆ ಮಾಡುತ್ತೇನೆ. ಇನ್ಯಾರಾದರೂ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದರೆ ಅವರ ರಾಜೀನಾಮೆ ಪಡೆಯುತ್ತಿದ್ದರು. ಆದರೆ, ಅವರು ಹೇಳಿರುವುದು ಅಪರಾಧ ಎಂದು ಸಿಎಂ ಹಾಗೂ ಡಿಸಿಎಂ ಸೇರಿ ಯಾರು ಸಹ ಮಾತನಾಡಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಬಡ, ರೈತ ಹಾಗೂ ದಲಿತ ವಿರೋಧಿಯೂ ಆಗಿದೆ. ತಕ್ಷಣ ಝಮೀರ್ ಅಹಮ್ಮದ್ ಅವರ ರಾಜೀನಾಮೆ ಪಡೆಯಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News