ಇದು ಪ್ರಜಾಪ್ರಭುತ್ವದ ಕೊನೆಯ ಚುನಾವಣೆಯಂತೆ ಕಾಣುತ್ತಿದೆ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

Update: 2024-03-17 13:53 GMT

ಮಲ್ಲಿಕಾರ್ಜುನ ಖರ್ಗೆ Photo: PTI

ಬೆಂಗಳೂರು: ಇದು ಪ್ರಜಾಪ್ರಭುತ್ವದ ಕೊನೆ ಚುನಾವಣೆಯಂತೆ ನನಗೆ ಕಾಣುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ರವಿವಾರ ಇಲ್ಲಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಮೋದಿ ಪ್ರಜಾಪ್ರಭುತ್ವ ಕೊನೆಗಾಣಿಸಬೇಕು ಅಂತ ಬಯಸುತ್ತಾರೆ. ಇದೇ ಪ್ರಜಾಪ್ರಭುತ್ವದ ಕೊನೆಯ ಚುನಾವಣೆ. ಮಾತು, ವರ್ತನೆಯಿಂದ ಜನರ ನಡುವೆ ಬೇಧ ಮೂಡಿಸಲು ಅವರು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮೋದಿ ಕಲಬುರಗಿಯಿಂದ ಪ್ರಚಾರ ಪ್ರಾರಂಭ ಮಾಡಿದ್ದಾರೆ. ಪ್ರತೀ ರಾಜ್ಯಕ್ಕೆ ಹೋಗಿ ಇದನ್ನೇ ಮಾಡುತ್ತಿದ್ದಾರೆ. ಇದೆಲ್ಲವನ್ನೂ ನೋಡಿದರೆ ಇದು ಪ್ರಜಾಪ್ರಭುತ್ವದ ಕೊನೆಯ ಚುನಾವಣೆ ಎಂಬಂತೆ ಕಾಣುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಭಾರತ್ ಜೋಡೋ ನ್ಯಾಯ ಯಾತ್ರೆಯ ಸಮಾರೋಪದಲ್ಲಿ ಎಲ್ಲ ನಾಯಕರು ಭಾಗಿಯಾಗುತ್ತಿದ್ದಾರೆ. ಎಲ್ಲ ಪಕ್ಷದ ನಾಯಕರಿಗೂ ಆಹ್ವಾನ ನೀಡಿದ್ದೇವೆ. ಇಂಡಿಯಾ ಒಕ್ಕೂಟ ಬಲಿಷ್ಠವಾಗಿದೆ ಎಂದು ಸಂದೇಶ ರವಾನಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಬಿಜೆಪಿಯವರಿಗೆ ಅನುಕೂಲ ಮಾಡಿಕೊಳ್ಳುವುದಕ್ಕೆಂದೇ ಇಷ್ಟೊಂದು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಚುನಾವಣಾ ಆಯೋಗ ಏಳು ಹಂತದಲ್ಲಿ ಚುನಾವಣೆ ಘೋಷಣೆ ಮಾಡಿದ್ದಾರೆ. ಸಾಮಾನ್ಯವಾಗಿ ನಾಲ್ಕೈದು ಹಂತದಲ್ಲಿ ಚುನಾವಣೆ ನಡೆಯುತ್ತಿತ್ತು. ಆದರೆ ಈ ಬಾರಿ ಏಳು ಹಂತದಲ್ಲಿ ಚುನಾವಣೆ ನಡೆಯುತ್ತಿದೆ. ಇದು ಸರಿಯಾದ ಪ್ರಕ್ರಿಯೆ ಅನ್ನಿಸಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News