ನ್ಯಾಯಾಲಯದ ಆದೇಶಕ್ಕೆ ಕಾಯದೆ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಟ್ಟರೆ ಒಳಿತು: ಬಿ ವೈ ವಿಜಯೇಂದ್ರ

Update: 2024-08-27 08:25 GMT

PC: fb.com/vijayendrayediyurappa

ಬೆಂಗಳೂರು: ಕಳೆದ ಎರಡು ತಿಂಗಳುಗಳಿಂದ ಕರ್ನಾಟಕದ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಡಳಿತದ ಕ್ಷಣಗಣನೆ ಆರಂಭವಾಗಿದೆ. ಸಿದ್ದರಾಮಯ್ಯನವರು ಯಾವುದೇ ಕ್ಷಣದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಿಗೆ ವಿಶ್ವಾಸ ಇಲ್ಲ. ವಿಧಾನಸೌಧಕ್ಕೂ ಸಚಿವರು ಹೋಗುತ್ತಿಲ್ಲ. ಯಾವಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುತ್ತಾರೋ, ಯಾವಾಗ ಸಿದ್ದರಾಮಯ್ಯರ ಪರವಾಗಿ ಬ್ಯಾಟಿಂಗ್ ಮಾಡಲು ದೆಹಲಿಗೆ ಹೋಗಬೇಕೋ ಎಂಬ ಆತಂಕ ಅವರಲ್ಲಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ-ಜೆಡಿಎಸ್ ಪಾದಯಾತ್ರೆಯಲ್ಲಿ ಸಾವಿರಾರು ಜನರು ಉತ್ಸಾಹದಿಂದ ಭಾಗವಹಿಸಿದ್ದರು. ಪಾಪ ಕಾಂಗ್ರೆಸ್ಸಿಗರು ಗಾಬರಿಯಿಂದ ನಮ್ಮ ಪಾದಯಾತ್ರೆ ತಲುಪುವ ಮುನ್ನ ಜನಾಂದೋಲನ ಮಾಡಿದ್ದರು. ಮತ್ತೊಂದೆಡೆ ಸ್ವತಃ ಸಿದ್ದರಾಮಯ್ಯನವರು ಮೈಸೂರಿನಲ್ಲಿದ್ದು, ಜನಾಂದೋಲನಕ್ಕೆ ಸಿದ್ಧತೆ ಮಾಡಿದ್ದರು. ಮುಖ್ಯಮಂತ್ರಿಗಳು ರಾಜ್ಯದ ಜನರ ವಿಶ್ವಾಸ ಕಳಕೊಂಡಿದ್ದಾರೆ. ಅವರ ಕುರಿತು ಕಾಂಗ್ರೆಸ್ಸಿನ ಶಾಸಕರೂ ವಿಶ್ವಾಸ ಕಳಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಇವತ್ತಲ್ಲ ನಾಳೆ ಸಿಎಂ ರಾಜೀನಾಮೆ ಕೊಡಲೇಬೇಕು. ಹೈಕೋರ್ಟಿನ ತೀರ್ಪು ಬಂದ ಬಳಿಕವಾದರೂ ಅವರು ರಾಜೀನಾಮೆ ನೀಡಲಿದ್ದಾರೆ. ಆ 14 ನಿವೇಶನಗಳು ಮುಡಾ ಪಾಲಾಗಿ ಬಡವರಿಗೆ ಸಿಗಲಿದೆ ಎಂದರು.

ಈ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಕೆಲಸಗಳು ಶುರುವೇ ಆಗಿಲ್ಲ. ಯಾವುದೇ ಹೊಸ ಯೋಜನೆಯನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಅನುಷ್ಠಾನ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಸರಕಾರದ ಗ್ಯಾರಂಟಿ ಪರಿಣಾಮವಾಗಿ ಕೆಎಸ್ಸಾರ್ಟಿಸಿಗೆ 4,500 ಕೋಟಿ ರೂ. ಕೊಡಬೇಕಿದೆ. ಇನ್ನೂ ಮೂರ್ನಾಲ್ಕು ತಿಂಗಳು ಹೀಗೇ ಮುಂದುವರೆದರೆ ಕೆಎಸ್ಸಾರ್ಟಿಸಿ ಬಾಗಿಲು ಮುಚ್ಚಲಿದೆ. ಸಂಬಳ ಕೊಡಲೂ ದುಡ್ಡಿಲ್ಲ. ಮತ್ತೊಂದು ಕಡೆ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸುವುದಾಗಿ ತಿಳಿಸಿದ್ದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕುಗ್ಗಿ ಹೋಗಿದ್ದು, 14 ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿಗಳಿದ್ದರೂ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವುದು ಇರಲಿ, ಅವರ ಗೌರವಧನವನ್ನು 3 ತಿಂಗಳಿಂದ ಪಾವತಿಸಿಲ್ಲ ಎಂದು ಆಕ್ಷೇಪಿಸಿದರು.

ಕರ್ನಾಟಕದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾನೂನು- ಸುವ್ಯವಸ್ಥೆ ಹಾಳಾಗಿದೆ. ಸರಕಾರ ಕಾಲಹರಣ ಮಾಡುತ್ತಿದೆ. ವಾಲ್ಮೀಕಿ ನಿಗಮದಲ್ಲಿ 87 ಕೋಟಿ ಹಗರಣ ನಡೆದ ಕುರಿತು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ. ಅದೇ ಮಾದರಿಯಲ್ಲಿ ಮುಡಾದ ತಪ್ಪನ್ನೂ ಒಪ್ಪಿಕೊಂಡು, ನ್ಯಾಯಾಲಯದ ಆದೇಶಕ್ಕೆ ಕಾಯದೆ ಕೂಡಲೇ ರಾಜೀನಾಮೆ ಕೊಟ್ಟರೆ ಒಳಿತು ಎಂದರು.

ಅಹಿಂದ ಸಮುದಾಯಗಳಿಗೆ ಅನ್ಯಾಯ..

ವಾಲ್ಮೀಕಿ ನಿಗಮದ ಹಗರಣ ಸಂಬಂಧ ಎಸ್ಐಟಿ ರಚಿಸಿ ಕ್ಲೀನ್ ಚಿಟ್ ಕೊಡಿಸುವ ಅಗತ್ಯ ಏನಿತ್ತು? ಸರಕಾರದ ದಲಿತರ ಬಗ್ಗೆ ಕಾಳಜಿ ಅಂದರೆ ಇದೇನಾ. ಈ ಹಗರಣಕ್ಕೆ ಸಂಬಂಧಿಸಿ ಸಿಬಿಐ, ಇ.ಡಿ. ತನಿಖೆ ನಡೆಯುತ್ತಿವೆ. ಇದೊಂದು ಗಂಭೀರ ಪ್ರಕರಣ. ಲೆಕ್ಕಾಧಿಕಾರಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಶಾಸಕರನ್ನು ದೂರವಿಟ್ಟು ಯಾರಿಗೆ ದ್ರೋಹ ಮಾಡುತ್ತಿದ್ದೀರಿ? ಅಹಿಂದ ಸಮುದಾಯಗಳಿಗೆ ಸಿದ್ದರಾಮಯ್ಯನವರು ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದರು.

ಹಿಂದೆ ಇದೇ ಸಿದ್ದರಾಮಯ್ಯನವರು ಎಸಿಬಿ ಮೂಲಕ ಕ್ಲೀನ್ ಚಿಟ್ ಪಡೆದುಕೊಂಡ ಇತಿಹಾಸ ಇದೆ ಎಂದ ಅವರು, ರಾಷ್ಟ್ರಮಟ್ಟದಲ್ಲಿ ಸಿದ್ದರಾಮಯ್ಯನವರ ವಿಚಾರದಲ್ಲಿ ಹೋರಾಟ ಮಾಡುವ ಕುರಿತು ರಾಜ್ಯದ ನಾಯಕರ ಕೆಲವು ಸಲಹೆಗಳಿದ್ದು, ಅದರ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಕ್ಷದ ವರಿಷ್ಠರು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಯತ್ನಾಳ್ ಅಥವಾ ಇನ್ಯಾರದೋ ವಿರುದ್ಧ ದೆಹಲಿಯಲ್ಲಿ ದೂರು ಕೊಡಲು ನನ್ನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿಲ್ಲ; ಸಂಘಟನೆ ಬಲಪಡಿಸಲು, ಬಿಜೆಪಿ ಸ್ಪಷ್ಟ ಬಹುಮತ ಪಡೆಯಲು ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ. ಯತ್ನಾಳ್ ಅವರ ಕುರಿತು ಇಲ್ಲಿ ನಾನು ಪ್ರಸ್ತಾಪಿಸಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News