ಜೈನಮುನಿ ಹತ್ಯೆ ಖಂಡಿಸಿ ಸದನದಲ್ಲಿ ಹೋರಾಟ: ಬಸವರಾಜ ಬೊಮ್ಮಾಯಿ
Update: 2023-07-09 18:10 GMT
ಬೆಂಗಳೂರು: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಸೋಮವಾರ ವಿಧಾನಸಭೆಯ ಒಳಗೆ ಹೋರಾಟ ನಡೆಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸ್ವಾಮೀಜಿಯ ಅಮಾನವೀಯ ಕೊಲೆ ಖಂಡಿಸಿ ಅನ್ನ ನೀರು ಬಿಟ್ಟು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹುಬ್ಬಳ್ಳಿಯ ವರೂರು ಶ್ರೀಕ್ಷೇತ್ರದ ಶ್ರೀ ಗುಣಧರ ನಂದಿ ಮಹಾರಾಜರಿಗೆ ದೂರವಾಣಿ ಮೂಲಕ ಮಾತನಾಡಿ ಈ ಘಟನೆಯನ್ನು ಉಗ್ರವಾಗಿ ಖಂಡಿಸಿರುವುದಾಗಿ ತಿಳಿಸಿದ್ದಾರೆ.
ಅಲ್ಲದೇ, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸರಕಾರಕ್ಕೆ ಆಗ್ರಹಿಸಿರುವುದಾಗಿ ತಿಳಿಸಿದ ಬೊಮ್ಮಾಯಿಯವರು, ಹತ್ಯೆಯನ್ನು ಖಂಡಿಸಿ, ಉನ್ನತ ಮಟ್ಟದ ತನಿಖೆ ನಡೆಸುವಂತೆ ಸೋಮವಾರ ವಿಧಾನಸಭೆಯಲ್ಲಿ ಹೋರಾಟ ಮಾಡುವುದಾಗಿ ಬಸವರಾಜ ಬೊಮ್ಮಾಯಿ ಸ್ವಾಮೀಜಿಗೆ ತಿಳಿಸಿದ್ದಾರೆ.