ಏಕಾಂಗಿಯಾಗಿ ಮೇಲಕ್ಕೆ ಬರಲಾಗದೇ ಬಿಜೆಪಿ ಜೊತೆ ಜೆಡಿಎಸ್ ಸೇರಿದೆ: ಎನ್. ಚೆಲುವರಾಯಸ್ವಾಮಿ
ಕೋಲಾರ: ಏಕಾಂಗಿಯಾಗಿ ಮೇಲಕ್ಕೆ ಬರೋಕೆ ಆಗಲ್ಲ. ಪಕ್ಷದ ಶಾಸಕರು ಬಿಟ್ಟು ಹೋಗ್ತಿದ್ದಾರೆ ಅನ್ನೋ ಭಯದಿಂದ ಬಿಜೆಪಿ ಜೊತೆ ಜೆಡಿಎಸ್ ಸೇರಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಟೀಕಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜೊತೆ ಫೈಟ್ ಮಾಡೋಕೆ ಆಗಲ್ಲ ಎಂದು ಬಿಜೆಪಿ ಸಹ ಜೆಡಿಎಸ್ ಜೊತೆ ಸೇರಿದೆ. ಜೆಡಿಎಸ್ ಹಾಗೂ ಬಿಜೆಪಿಯ ಕೆಲವರಿಗೆ ಮೈತ್ರಿ ಮಾಡಿಕೊಳ್ಳುವುದು ಇಷ್ಟ ಇಲ್ಲ. ಕಾಂಗ್ರೆಸ್ ನ ಸಂಪರ್ಕ ಮಾಡ್ತಿದ್ದಾರೆ, ಸಿದ್ಧಾಂತ ಒಪ್ಪಿ ಬಂದರೆ ಪಕ್ಷದ ನಾಯಕರು ಸೇರ್ಪಡೆ ಮಾಡ್ಕೋತಾರೆ. ನಾವು ಯಾರನ್ನೂ ಆಪರೇಷನ್ ಮಾಡ್ತಿಲ್ಲ. ನಮಗೆ ಅವಶ್ಯಕತೆಯೂ ಇಲ್ಲ.136 ಜನ ಇದ್ದಾರೆ.ಒಂದೋ ಎರಡೋ ಇದ್ದಿದ್ದರೆ ಯೋಚನೆ ಮಾಡಬೇಕಿತ್ತು ಎಂದರು.
ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಒಂದು ದಿನವಾದರೂ ಕೃತಜ್ಞತೆ ಹೇಳಿದ್ದಾರ? ಅವರಿಗೆ ಕಾಳಜಿ ಹಾಗೂ ಸಂಸ್ಕಾರ ಇದೆಯಾ ಅನ್ನೋದು ಗೊತ್ತಿಲ್ಲ. ಒಂದು ಲೋಟ ನೀರು ಕೊಟ್ಟರೂ ಸಾಕು, ಜನ ನೆನೆಪು ಮಾಡ್ಕೊಳ್ತಾರೆ. ಅವರು ಸಿಎಂ ಇದ್ದಾಗ ಅವರ ಚಟುವಟಿಕೆ ಹಾಗೂ ಸರ್ಕಾರ ನಡೆಸಿದ ರೀತಿ ಹೇಗಿತ್ತು. ಜೆಡಿಎಸ್ ಅಧ್ಯಕ್ಷ ವಿಶ್ವನಾಥ್ ಅವರೇ ಪಕ್ಷ ಬಿಟ್ಟು ಹೋದರು. ಗೋಪಾಲಣ್ಣ, ನಾರಾಯಣಗೌಡ ಏಕೆ ಜೆಡಿಎಸ್ ಬಿಟ್ಟರು. ಅವರೇ ಸರ್ಕಾರ ಕಳೆದುಕೊಂಡು ಬೇರೆಯವರ ಮೇಲೆ ಹೇಳಬಾರದು. ಯಡಿಯೂರಪ್ಪ, ಬೊಮ್ಮಾಯಿ ಹಾಗೂ ಕುಮಾರಸ್ವಾಮಿ ಆಡಳಿತಕ್ಕೆ ಬೇಸತ್ತು, ಜನರು ಕಾಂಗ್ರೆಸ್ ಗೆ ಮತ ನೀಡಿದ್ದಾರೆ ಎಂದರು.