ಕನ್ನಡಿಗರಿಗೆ ಉದ್ಯೋಗ ಮೀಸಲಾತಿ | ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಸಂಬಂಧ ಉಂಟಾಗಿರುವ ಗೊಂದಲವನ್ನು ನಿವಾರಿಸಲು ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗುರುವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ವಿಪಕ್ಷ ನಾಯಕ ಆರ್.ಅಶೋಕ್ ವಿಷಯ ಪ್ರಸ್ತಾಪಿಸಿ, ಪತ್ರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಎಂದು ಸುದ್ದಿಗಳು ಬಂದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಟ್ವೀಟರ್(ಎಕ್ಸ್)ಖಾತೆಯಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಎಂದು ಒಂದು ಬಾರಿ, ಎರಡನೆ ಬಾರಿ ಶೇ.75ರಷ್ಟು, ಮೂರನೆ ಬಾರಿ ಶೇ.50ರಷ್ಟು ಮೀಸಲಾತಿ ಎಂದು ಪೋಸ್ಟ್ ಗಳನ್ನು ಹಾಕಿ, ನಂತರ ಡಿಲೀಟ್ ಮಾಡಲಾಗಿದೆ ಎಂದರು.
ಈ ರೀತಿ ಪದೇ ಪದೇ ಪೋಸ್ಟ್ ಗಳನ್ನು ಹಾಕುವುದು, ನಂತರ ಡಿಲೀಟ್ ಮಾಡುವುದರಿಂದ ಗೊಂದಲ ಉಂಟಾಗಿದೆ. ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರಿಂದ ನಾವು ಇದನ್ನು ಬಯಸಿರಲಿಲ್ಲ. ಶೇ.100ರಷ್ಟು ಮೀಸಲಾತಿ ನೀಡುವ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನ ಆಗಿದೆ ಎಂದು ಒಮ್ಮೆ ಪೋಸ್ಟ್ ಹಾಕಿದರು, ನಂತರ ಸಂಪುಟದಲ್ಲಿ ತೀರ್ಮಾನವೇ ಆಗಿಲ್ಲ ಎಂದು ಪೋಸ್ಟ್ ಬಂತು. ಇದು ಒಂದು ರೀತಿಯಲ್ಲಿ ತುಘಲಕ್ ಸರಕಾರ. ಆದುದರಿಂದ, ಮುಖ್ಯಮಂತ್ರಿ ಈ ಬಗ್ಗೆ ಸ್ಪಷ್ಟಣೆ ನೀಡಲಿ ಎಂದು ಅವರು ಆಗ್ರಹಿಸಿದರು.
ಈ ಕುರಿತು ಸ್ಪಷ್ಟಣೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಇಲ್ಲಿ ಯಾವ ಮುಹಮ್ಮದ್ ಬಿನ್ ತುಘಲಕ್ ಆಡಳಿತವು ಆಗಿಲ್ಲ. ಸಿದ್ದರಾಮಯ್ಯ ನೇತೃತ್ವದ ಆಡಳಿತ ಸರಕಾರವೇ ಕರ್ನಾಟಕದಲ್ಲಿದೆ. ಸೋಮವಾರ ಸಂಪುಟ ಸಭೆಯಲ್ಲಿ ಈ ವಿಚಾರ ಸಂಪೂರ್ಣ ಚರ್ಚೆಯಾಗಿಲ್ಲ. ಅಷ್ಟರಲ್ಲಿ ಪತ್ರಿಕೆಗಳಲ್ಲಿ ಸುದ್ದಿ ಬಂದಿತ್ತು. ಇನ್ನೊಂದು ಸಾರಿ ಕೂಲಂಕಷವಾಗಿ ಚರ್ಚೆ ಮಾಡಿ ತೀರ್ಮಾನ ಮಾಡೋಣ ಎಂದು ಹೇಳಿದ್ದೆ. ಹಾಗಾಗಿ, ಸ್ವಲ್ಪ ಗೊಂದಲ ಆಗಿದೆ. ಅದನ್ನು ನಿವಾರಿಸಲು ಮುಂದಿನ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ ಎಂದರು.
ಹೊಂದಾಣಿಕೆ ರಾಜಕಾರಣ ನಾನು ಮಾಡಿಲ್ಲ: ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಂಬಂಧ ಮುಖ್ಯಮಂತ್ರಿಯ ಅಧಿಕೃತ ಟ್ವಿಟರ್ ಖಾತೆಯಿಂದ ಪದೇ ಪದೇ ಪೋಸ್ಟ್ ಗಳನ್ನು ಡಿಲೀಟ್ ಮಾಡಿರುವುದರ ಕುರಿತು ಪ್ರಸ್ತಾಪಿಸುತ್ತಿದ್ದ ವಿಪಕ್ಷ ನಾಯಕ ಆರ್.ಅಶೋಕ್, ‘ನಿನ್ನೆ ತಾನೇ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿದ್ದರಾಮಯ್ಯರನ್ನು ಹೊಗಳಿದ್ದರು’ ಎಂದರು.
ಈ ವೇಳೆ ಮಧ್ಯಪ್ರವೇಶಿಸಿದ ಯತ್ನಾಳ್, ‘ನೀವು ಅದಕ್ಕೆಲ್ಲ ಬಣ್ಣ ಹಚ್ಚಲು ಹೋಗಬೇಡಿ, ನಾನು ಒಂದೇ ಒಂದು ಕೆಲಸಕ್ಕಾಗಿ ಸಿದ್ದರಾಮಯ್ಯರ ಬಳಿ ಹೋಗಿಲ್ಲ, ಅವರ ಕಚೇರಿಗೂ ಹೋಗಿಲ್ಲ. ನೀವು ಈ ರೀತಿ ಫುಲ್ ಟಾಸ್ ಹಾಕಿ ಹೊಡೆದರೆ ಯತ್ನಾಳ್ ಏನು ಆಗುವುದಿಲ್ಲ. ನಾನು ಯಾವುದೆ ನನ್ನ ಪರವಾಗಿ ಕೆಲಸ ಮಾಡಿಕೊಂಡಿಲ್ಲ. ಹೊಂದಾಣಿಕೆ ರಾಜಕಾರಣ ನಾನು ಮಾಡಿಲ್ಲ’ ಎಂದರು.