ನಾಳೆಯಿಂದ(ಫೆ.12) ವಿಧಾನ ಮಂಡಲ ಜಂಟಿ ಅಧಿವೇಶನ

Update: 2024-02-11 12:34 GMT

ಬೆಂಗಳೂರು: ವಿಧಾನ ಮಂಡಲ ಜಂಟಿ ಅಧಿವೇಶನ ನಾಳೆಯಿಂದ(ಫೆ.12)ಆರಂಭವಾಗಲಿದೆ. ವರ್ಷದ ಮೊದಲ ಅಧಿವೇಶನ ಇದಾಗಿದ್ದು, ಬೆಳಗ್ಗೆ 11ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಅಧಿವೇಶನ ಕಲಾಪ ಆರಂಭಕ್ಕೂ ಮುನ್ನ ರಾಜ್ಯಪಾಲರನ್ನು ವಿಧಾನಸಭೆಯ ಸ್ಪೀಕರ್, ಪರಿಷತ್ ಸಭಾಪತಿ, ಮುಖ್ಯಮಂತ್ರಿ, ಕಾನೂನು ಸಚಿವರು ಸೇರಿದಂತೆ ಉಭಯ ಸದನಗಳ ಕಾರ್ಯದರ್ಶಿಗಳು ಸ್ವಾಗತಿಸಲಿದ್ದು, ವಿಧಾನಸಭೆ ಸಭಾಂಗಣಕ್ಕೆ ಗೌರವ ಪೂರ್ವಕವಾಗಿ ರಾಜ್ಯಪಾಲ ಥಾವ‌ರ್ ಚಂದ್ ಗೆಹ್ಲೋಟ್ ಅವರನ್ನು ಬರಮಾಡಿಕೊಳ್ಳಲಾಗುತ್ತದೆ.

ರಾಜ್ಯಪಾಲರು, ರಾಜ್ಯ ಸರಕಾರದ ಮುನ್ನೋಟದ ಭಾಷಣ ಮಾಡಲಿದ್ದಾರೆ. ಆ ಬಳಿಕ ರಾಜ್ಯಪಾಲರನ್ನು ಬೀಳ್ಕೊಡಲಾಗುತ್ತದೆ. ನಂತರ ಕಲಾಪ ಸಮಾವೇಶಗೊಳ್ಳಲಿದ್ದು, ಕಾರ್ಯದರ್ಶಿಯವರು ವರದಿ ಮಂಡನೆ ಮಾಡಲಿದ್ದಾರೆ. ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಕಲಾಪ ನಡೆಯಲಿದೆ ಎಂದು ತಿಳಿಸಲಾಗಿದೆ.

ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ನಾಗನಗೌಡ ಕಂದಕೂರ ಮತ್ತು ಹಿರಿಯ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಅವರ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚನೆ ಸಲ್ಲಿಸಲಾಗುತ್ತದೆ. ಫೆ.13ರಿಂದ ಸರಕಾರಿ ಕಾರ್ಯ-ಕಲಾಪಗಳು ನಡೆಯಲಿದ್ದು, ಅಂದಿನಿಂದ ಆಡಳಿತ ಪಕ್ಷ-ಪ್ರತಿಪಕ್ಷಗಳ ನಡುವೆ ವಾಗ್ಯುದ್ಧಕ್ಕೆ ವೇದಿಕೆ ಸಜ್ಜುಗೊಳ್ಳಲಿದೆ.

ರಾಜ್ಯದಲ್ಲಿ ತೀವ್ರ ಸ್ವರೂಪದ ಮೇವಿನ ಕೊರತೆ, ಕುಡಿಯುವ ನೀರು, ವಿದ್ಯುತ್ ಅಭಾವ, ಕೇಂದ್ರ ಸರಕಾರದಿಂದ ಅನುದಾನ ಹಂಚಿಕೆ ತಾರತಮ್ಯ ಆರೋಪ, ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮ ಪ್ರತಿಷ್ಠಾಪನೆ, ಧ್ವಜ ವಿವಾದವೂ ಸೇರಿದಂತೆ ಇನ್ನಿತರ ವಿಚಾರಗಳನ್ನು ಪ್ರಸ್ತಾಪಗೊಳ್ಳುವ ಸಾಧ್ಯತೆಗಳಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News