ಹಿಂದುತ್ವ ಹೆಸರಿನಲ್ಲಿ ಮತ: ಜೆ.ಆರ್.ಲೋಬೊ ಚುನಾವಣಾ ತಕರಾರು ಅರ್ಜಿ ಹೈಕೋರ್ಟ್ ನಿಂದ ವಜಾ

Update: 2023-07-13 16:57 GMT

ಜೆ.ಆರ್.ಲೋಬೊ 

ಬೆಂಗಳೂರು, ಜು.13: ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2018ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ದುರ್ಬಳಕೆ ಮಾಡಲಾಗಿದೆ ಹಾಗೂ ಬಿಜೆಪಿ ಅಭ್ಯರ್ಥಿಯ ಪತ್ನಿ ಧರ್ಮದ ಆಧಾರದಲ್ಲಿ ಹಿಂದುತ್ವ ಹೆಸರಿನಲ್ಲಿ ಮತ ಯಾಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜೇತ ಅಭ್ಯರ್ಥಿ ಆಯ್ಕೆಯನ್ನು ರದ್ದುಪಡಿಸಿ ಪರಾಜಿತ ಅಭ್ಯರ್ಥಿ ಜೆ.ಆರ್.ಲೋಬೊ ಆಯ್ಕೆ ಘೋಷಿಸುವಂತೆ ಕೋರಿದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಅಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಜೆ.ಆರ್.ಲೋಬೊ ಅವರು ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತ್ ವಿರುದ್ಧ ಸೋಲು ಕಂಡಿದ್ದರು. ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೊ ಅವರು ತಮ್ಮ ವಕೀಲರಾದ ರವೀಂದ್ರನಾಥ್ ಕಾಮತ್ ಅವರ ಮೂಲಕ ರಾಜ್ಯ ಹೈಕೋರ್ಟ್‍ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಇವಿಎಂ ದುರ್ಬಳಕೆ ಮಾಡಲಾಗಿದೆ. ಅಲ್ಲದೆ, ವೇದವ್ಯಾಸ್ ಕಾಮತ್ ಅವರ ಪತ್ನಿ ಹಿಂದುತ್ವ ಹೆಸರಿನಲ್ಲಿ ಮತಯಾಚನೆ ಮಾಡುವ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ್ದಾರೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂಬ ಆರೋಪವನ್ನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

 

ವೇದವ್ಯಾಸ್ ಕಾಮತ್ ಪರವಾಗಿ ವಾದಿಸಿದ ಹಿರಿಯ ವಕೀಲ ಅರುಣ್ ಶ್ಯಾಮ್, ಹಿಂದುತ್ವ ಎನ್ನುವುದು ಧರ್ಮ ಸೂಚಕವಲ್ಲ. ಅದೊಂದು ಜೀವನಪದ್ಧತಿ ಎಂಬುದನ್ನು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಇವಿಎಂ ದುರ್ಬಳಕೆಯ ಪ್ರಶ್ನೆಯೇ ಇಲ್ಲ. ಇವಿಎಂ ದುರ್ಬಳಕೆ ಅಸಾಧ್ಯ ಎಂಬುದನ್ನು ಕೂಡ ಈಗಾಗಲೇ ಸುಪ್ರೀಂಕೋರ್ಟ್ ಹೇಳಿರುವ ಕುರಿತ ತೀರ್ಪನ್ನು ಉಲ್ಲೇಖಿಸಿ ಅವರು ವಾದ ಮಂಡಿಸಿದ್ದರು.

ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ದೇವದಾಸ್ ಅವರಿದ್ದ ನ್ಯಾಯಪೀಠವು ಅರ್ಜಿದಾರರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಮನಗಂಡು ಜು.6ರಂದು ಅರ್ಜಿಯನ್ನು ವಜಾಗೊಳಿದೆ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News