ಕಲಬುರಗಿ: ಪ್ಲಾಟ್ ಫಾರ್ಮ್‌ನಲ್ಲಿ ನಿಂತಿದ್ದ ರೈಲ್ವೆ ಬೋಗಿಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಕಲಬುರಗಿ: ರೈಲ್ವೇ ನಿಲ್ದಾನದ ಪ್ಲಾಟ್ ಫಾರ್ಮ್‌ನಲ್ಲಿ ನಿಂತಿದ್ದ ರೈಲ್ವೆ ಬೋಗಿಗೆ ವ್ಯಕ್ತಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ರೈಲ್ವೆ ಜಂಕ್ಷನ್ ನಲ್ಲಿ ವರದಿಯಾಗಿದೆ.
ಸೋಲಾಪುರ ನಗರದ ನಿವಾಸಿ ಮಲ್ಲಿನಾಥ ಸಿದ್ದಪ್ಪ ದೋಶೆಟ್ಟಿ (38) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ಸಿದ್ದಪ್ಪ ವಾಡಿ ರೈಲ್ವೆಯ ಎಸ್ ಎನ್ ಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಕೆಲ ದಿನಗಳಿಂದ ಕೆಲಸಕ್ಕೆ ಗೈರು ಹಾಜರಿ ಆಗಿದ್ದ ಸಿದ್ದಪ್ಪ ಕಾಣೆಯಾಗಿದ್ದಾನೆ ಎಂದು ಪೋಷಕರು ಇತ್ತೀಚೆಗೆ ವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನಲೆ ರವಿವಾರ ರಾಯಚೂರು ನಗರದಲ್ಲಿ ಪತ್ತೆ ಹಚ್ಚಿ, ವಾಡಿ ಪೊಲೀಸ್ ಠಾಣೆಗೆ ಕರೆ ತಂದು ಪೋಷಕರಿಗೆ ಒಪ್ಪಿಸಿದ್ದರು.
ಸೋಮವಾರ ಬೆಳಗ್ಗೆ ವಾಡಿ ರೈಲ್ವೆ ಪ್ಲಾಟ್ ಫಾರ್ಮ್ 1 ರಲ್ಲಿ ಕರ್ಮಚಾರಿ ರೈಲು ಬೋಗಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ರೈಲ್ವೆ ಇಲಾಖೆ ಪಿಎಸ್'ಐ ಮಹ್ಮೂದ್ ಪಾಶಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.