ಕಲಬುರಗಿ | ಬಿಸಿಯೂಟದ ಸಾಂಬಾರಿಗೆ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ
ಕಲಬುರಗಿ: ಅಫಜಲಪುರ ತಾಲೂಕಿನ ಚಿಣಮಗೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಬಿಸಿಯೂಟ ಬಡಿಸುವ ಸಂದರ್ಭದಲ್ಲಿ ಬಿಸಿ ಸಾಂಬಾರಿಗೆ ಬಿದ್ದು ಗಂಭೀರ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಶಿಕ್ಷಕಿ ಸೇರಿ ಇಬ್ಬರನ್ನು ಅಮಾನತು ಮಾಡಲಾಗಿದೆ.
ಸುರಕ್ಷಿತವಾಗಿ ಬಿಸಿಯೂಟ ವಿತರಿಸದೇ ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಲಾಲಬಿ ನದಾಫ್ ಮತ್ತು ಸಹ ಶಿಕ್ಷಕ ರಾಜು ಚವ್ಹಾಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಹಾಗೂ ಮುಖ್ಯ ಅಡುಗೆಯವರಾದ ಕಸ್ತೂರಿಬಾಯಿ ಎಂ.ತಳಕೇರಿ ಅವರನ್ನು ವಜಾಗೊಳಿಸಿ ಕ್ರಮವಾಗಿ ಡಿ.ಡಿ.ಪಿ.ಐ ಮತ್ತು ತಾಲೂಕ ಪಂಚಾಯತ್ ಇ.ಓ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ನೌಕರರು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ 98(ಎ) ಪ್ರಕಾರ ಜೀವನಾಂಶ, ಭತ್ಯೆ ಪಡೆಯಲು ಅರ್ಹರಾಗಿದ್ದು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಖ್ಯ ಅಡುಗೆಯವರ ವಜಾ: ಪ್ರಕರಣದಲ್ಲಿ ಬಿಸಿಯೂಟ ವಿತರಣೆಗೆ ವ್ಯವಸ್ಥಿತ ಸುರಕ್ಷತಾ ಕ್ರಮ ಕೈಗೊಳ್ಳದೆ ಮತ್ತು ಗುರುವಾರ ಅನಧಿಕೃತ ಗೈರು ಹಾಜರಾದ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ಲಕ್ಷ್ಯದ ಅರೋಪದ ಮೇಲೆ ಶಾಲೆಯ ಮುಖ್ಯ ಅಡುಗೆಯವರಾದ ಕಸ್ತೂರಿಬಾಯಿ ಎಂ. ತಳಕೇರಿ ಅವರನ್ನು ಸಹ ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಫಿ ಅವರು ಆದೇಶ ಹೊರಡಿಸಿದ್ದಾರೆ.