ಕಲಬುರಗಿ | ಬಿಜೆಪಿ ಕಾರ್ಯಕರ್ತನ ಪ್ರಕರಣಕ್ಕೆ ತಿರುವು; ಸಾಲಬಾಧೆಯಿಂದ ಆತ್ಮಹತ್ಯೆ ಎಂದು ದೂರು ದಾಖಲು
ಕಲಬುರಗಿ: ಸೇಡಂ ತಾಲೂಕಿನ ಶಿರೋಳ್ಳಿ ಗ್ರಾಮದ ಶಿವಕುಮಾರ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ʼಆತ್ಮಹತ್ಯೆಗೆ ಸಾಲದ ಹೊರೆ ಕಾರಣವಾಗಿದೆʼ ಎಂದು ಕುಟುಂಸ್ಥರು ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇತ್ತ ʼಶಿವಕುಮಾರ ಪೂಜಾರಿ ಬಿಜೆಪಿ ಮುಖಂಡರಾಗಿದ್ದು, ಆತ್ಮಹತ್ಯೆಗೆ ಮಾಜಿ ಸಚಿವ ಶರಣ ಪ್ರಕಾಶ್ ಪಾಟೀಲ್ ರ ಬೆಂಬಲಿಗರು ಕಾರಣʼ ಎಂದು ಸೇಡಂ ಕ್ಷೇತ್ರದ ಬಿಜೆಪಿ ಮುಖಂಡ, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಲೂಕುರ್ ಅವರು ಆಡಿಯೋ ಬಿಡುಗಡೆ ಮಾಡಿ ಗಂಭೀರ ಆರೋಪ ಮಾಡಿದ್ದರು.
ಗುರುವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಿವಕುಮಾರ್ ಅವರ ಕುಟುಂಬಸ್ಥರು ಸುಲೆಪೇಟ್ ಪೊಲೀಸ್ ಠಾಣೆಯಲ್ಲಿ ಸಾಲ ಬಾಧೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಿಸಿದ್ದು, ಕೆಜಿಬಿ ಬ್ಯಾಕ್ ನಿಂದ 70 ಸಾವಿರ ಸಾಲ ಸೇರಿದಂತೆ 10-12 ಲಕ್ಷ ಸಾಲ ಪಡೆದಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಸಾವಿನ ಬಗ್ಗೆ ನಮಗೆ ಯಾರ ಮೇಲೂ ಯಾವುದೇ ಸಂಶಯವಿಲ್ಲʼʼ ಎಂದು ಪ್ರಕರಣ ದಾಖಲಿಸಿದ್ದಾರೆ.
ಇತ್ತ ಬಿಜೆಪಿ ನಾಯಕರು ʼʼಶಿವಕುಮಾರ ಆತ್ಮಹತ್ಯೆಗೆ ಕಾಂಗ್ರೆಸ್ ಕಾರ್ಯಕರ್ತರು ಕಾರಣ. ಕಾಂಗ್ರೆಸ್ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಾಳಿ ಮತ್ತು ದೌರ್ಜನ್ಯಗಳು ನಡೆಸಲಾಗುತ್ತಿದೆ ʼʼ ಎಂದು ಆರೋಪಿಸಿ ಹೋರಾಟಕ್ಕೆ ಬಿಜೆಪಿ ಪಕ್ಷದ ನಾಯಕರು ತಯಾರಿ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ʼʼನನ್ನ ಮಗ ಸಾಲ ಮಾಡಿಕೊಂಡಿದ್ದʼʼ
ಆತ್ಮಹತ್ಯೆ ಮಾಡಿಕೊಂಡ ಶಿವಕುಮಾರ್ ತಾಯಿ ಸುಶೀಲಾಬಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ʼʼಆತ್ಮಹತ್ಯೆ ಯಾಕೆ ಮಾಡಿಕೊಂಡಿದ್ದಾನೆ ಎಂದು ನನಗೆ ಗೋತ್ತಿಲ್ಲ. ನಸುಕಿನ ಜಾವ 4:30 ಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಮಗ ಸಾಲ ಮಾಡಿಕೊಂಡಿದ್ದ. ಆದರೆ, ಎಷ್ಟು ಸಾಲ ಎಂದು ನಮಗೂ ಹೇಳಿಲ್ಲ. ಸಚಿವ ಶರಣಪ್ರಕಾಶ್ ಹೆಸರು ಹೇಳಿರುವ ಆಡಿಯೋ ಬಗ್ಗೆ ಗೊತ್ತಿಲ್ಲ. ನಾವು ಅತ್ತೆ ಸೊಸೆ ಮನೆಯಲ್ಲಿ ಇರುತ್ತೇವೆ. ಹಾಗಾಗಿ ಯಾವುದೇ ಗಲಾಟೆ ಬಗ್ಗೆ ನಮಗೆ ಗೊತ್ತಿಲ್ಲʼʼ ಎಂದು ಸ್ಪಷ್ಟಪಡಿಸಿದರು.
ಸಿಬಿಐಗೆ ಶಿಫಾರಸು ಮಾಡುವಂತೆ ಒತ್ತಾಯಿಸಿದ್ದ ಕೇಂದ್ರ ಸಚಿವ ಖೂಬಾ
ʼʼರೈತ ಶಿವಕುಮಾರ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಬೇಕು. ಇಲ್ಲವಾದರೆ ಸಿಬಿಐಗೆ ಶಿಫಾರಸು ಮಾಡಬೇಕುʼʼ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಒತ್ತಾಯಿಸಿದ್ದರು.