‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ’ ಸ್ಥಾಪನೆ : ಸಿಎಂ ಸಿದ್ದರಾಮಯ್ಯ

Update: 2024-09-17 15:25 GMT

ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಒಬ್ಬ ಮುಖ್ಯ ಇಂಜಿನಿಯರ್ ಹಾಗೂ ಹೆಚ್ಚುವರಿ ಕಾರ್ಯದರ್ಶಿ ಹುದ್ದೆಯನ್ನು ಸೃಜಿಸಿ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಗಳವಾರ ಕಲಬುರಗಿಯ ಮಿನಿ ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಈ ಭಾಗದಲ್ಲಿ ಖಾಲಿ ಇರುವ 17,439 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ತೀರ್ಮಾನ ಮಾಡಲಾಗಿದೆ. ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿಗೆ 11770 ಕೋಟಿ ರೂ. ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು,  ಕೃಷಿಗೆ 100 ಕೋಟಿ ರೂ., ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ 1550 ಕೋಟಿ ರೂ., ಅರಣ್ಯ ಇಲಾಖೆಗೆ 32 ಕೋಟಿ ರೂ., ಆರೋಗ್ಯ ಇಲಾಖೆಗೆ 910 ಕೋಟಿ ರೂ., ವಸತಿ ಇಲಾಖೆಗೆ 320 ಕೋಟಿ ರೂ.ನೀಡಲಾಗಿದೆ. ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಬಂಧಿಸಿದಂತೆ ಘೋಷಿಸಿರುವ ಎಲ್ಲ ವಿಷಯಗಳಿಗೂ ಅನುಮೋದನೆ ನೀಡಲಾಗಿದೆ" ಎಂದು ಮುಖ್ಯಮಂತ್ರಿ ತಿಳಿಸಿದರು.

ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ಸಂಬಂಧ ನಂಜುಂಡಪ್ಪ ನೀಡಿದ್ದ ವರದಿಯ ಮೌಲ್ಯಮಾಪನ ಮಾಡಿ, ಈವರೆಗೆ ಯಾವ ತಾಲೂಕುಗಳು ಯಾವ ರೀತಿ ಸಾಮಾಜಿಕ ಹಾಗೂ ಆರ್ಥಿಕವಾಗಿ ಬೆಳವಣಿಗೆಯಾಗಿವೆ, ಯಾವ ತಾಲೂಕುಗಳು ಇನ್ನೂ ಅಭಿವೃದ್ಧಿಯಿಂದ ಹಿಂದುಳಿದಿವೆ ಎಂಬುದರ ಕುರಿತು ವರದಿ ನೀಡುವಂತೆ ಆರ್ಥಿಕ ತಜ್ಞ ಡಾ.ಗೋವಿಂದರಾವ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆರು ತಿಂಗಳಲ್ಲಿ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ 45 ಪ್ರಾಥಮಿಕ ಆರೋಗ್ಯ ಕೇಂದ್ರ, 31 ಸಮುದಾಯ ಆರೋಗ್ಯ ಕೇಂದ್ರ ಸ್ಥಾಪಿಸುತ್ತಿದ್ದು, 9 ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೇಗೇರಿಸಿ ಜಿಲ್ಲಾ ಆಸ್ಪತ್ರೆಯಾಗಿ ಮಾಡುತ್ತೇವೆ. ಆರೋಗ್ಯ ಇಲಾಖೆಗೆ 910 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಸೆ.22ರಂದು ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಣೆ: ತುಂಗಭದ್ರಾ ಜಲಾಶಯದಲ್ಲಿ ಕೊಚ್ಚಿಕೊಂಡು ಹೋಗಿದ್ದ ಗೇಟ್ ಅನ್ನು ಪವಾಡ ಸದೃಶವಾಗಿ ಐದೇ ದಿನಗಳಲ್ಲಿ ನೀರನ್ನು ಉಳಿಸಿಕೊಂಡು ಗೇಟ್ ಅಳವಡಿಸಿದ್ದೇವೆ. ಸೆ.22ರಂದು ಆ ಜಲಾಶಯಕ್ಕೆ ನಾವು ಬಾಗಿನ ಅರ್ಪಣೆ ಮಾಡಲಿದ್ದೇವೆ. ಜೊತೆಗೆ, ಗೇಟ್ ಅಳವಡಿಕೆಯಲ್ಲಿ ಶ್ರಮಿಸಿದ ಎಲ್ಲ ಅಧಿಕಾರಿ, ಸಿಬ್ಬಂದಿಗಳು, ಇಂಜಿನಿಯರ್‌ಗಳನ್ನು ಸನ್ಮಾನಿಸಲಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

‘ಪ್ರಜಾ ಸೌಧ’: ಅನುಭವ ಮಂಟಪದಿಂದ ಅಂಜನಾದ್ರಿ ಬೆಟ್ಟದವರೆಗೆ ಬರುವಂತಹ ಎಲ್ಲ ಪ್ರವಾಸೋದ್ಯಮ ಸ್ಮಾರಕಗಳನ್ನು ಉಳಿಸಿ, ಅಭಿವೃದ್ಧಿ ಮಾಡಲು ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಎಲ್ಲ ತಾಲೂಕುಗಳಲ್ಲಿರುವ ಮಿನಿ ವಿಧಾನಸೌಧಗಳನ್ನು ‘ಪ್ರಜಾ ಸೌಧ’ಗಳೆಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ್ ಪಾಟೀಲ್, ಎಚ್.ಕೆ.ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News