ದಕ್ಷಿಣ ಕನ್ನಡದ ಪಿಲಿಕುಳದಲ್ಲಿ ಕಂಬಳ ಆಯೋಜನೆ ಬಗ್ಗೆ ನಿರ್ಧಾರ ಅಂತಿಮವಾಗಿಲ್ಲ : ಹೈಕೋರ್ಟ್‌ಗೆ ಸರಕಾರದ ಮಾಹಿತಿ

Update: 2024-11-13 06:59 GMT

ಸಾಂದರ್ಭಿಕ ಚಿತ್ರ(PTI)

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದ ನಿಸರ್ಗಧಾಮದ ಬಳಿ ನ.17ರಂದು ಕಂಬಳ ಸ್ಪರ್ಧೆ ಆಯೋಜನೆ ಮಾಡುವ ಬಗ್ಗೆ ಈವರೆಗೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಪಿಲಿಕುಳದ ಪ್ರಾಣಿ ಸಂಗ್ರಹಾಲಯ (ನಿಸರ್ಗ ಧಾಮ)ದ ಸಮೀಪ ಕಂಬಳ ಆಯೋಜನೆ ಪ್ರಶ್ನಿಸಿ ಪೆಟಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ .ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಈ ವೇಳೆ ಪೇಟಾ ಪರ ವಾದ ಮಂಡಿಸಿದ ವಕೀಲರು, ದಕ್ಷಿಣ ಕನ್ನಡ ಹಾಗೂ ಉಡುಪಿಯ ಯಾವುದೇ ಭಾಗದಲ್ಲಿ ಕಂಬಳ ಸ್ಪರ್ಧೆಗೆ ಆಕ್ಷೇಪವಿಲ್ಲ. ಆದರೆ, ನ.17ರಂದು ಪಿಲಿಕುಳ ಪ್ರಾಣಿ ಸಂಗ್ರಹಾಲಯದ ಸಮೀಪ ಆಯೋಜನೆ ಮಾಡಲು ನಿರ್ಧಾರಕೈಗೊಳ್ಳಲಾಗಿದೆ. ಇದರಿಂದ ಅಲ್ಲಿರುವ ವನ್ಯಜೀವಿಗಳಿಗೆ ಸಮಸ್ಯೆಯಾಗುತ್ತದೆ. ಈ ಸಂಬಂಧ ಪ್ರಾಣಿ ಸಂಗ್ರಹಾಲಯದ ನಿರ್ದೇಶಕರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ ಎಂದರು.

ಈ ವೇಳೆ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ನ.17ಕ್ಕೆ ಪಿಲಿಕುಳದಲ್ಲಿ ಕಂಬಳ ಸ್ಪರ್ಧೆ ನಡೆಸುವ ನಿರ್ಧಾರ ಕೈಗೊಂಡಿಲ್ಲ. ಈ ಸಂಬಂಧ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಸ್ಥಳದಲ್ಲಿ ಕಂಬಳ ಸ್ಪರ್ಧೆ ಆಯೋಜಿಸಲಾಗುತ್ತದೆ. ಅವರು ವರದಿ ನೀಡಬೇಕು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಂಬಳ ಸ್ಪರ್ಧೆ ಉಸ್ತುವಾರಿಯಾಗಿರುತ್ತಾರೆ. ಹೀಗಾಗಿ, ಅವರನ್ನು ಅರ್ಜಿದಾರರು ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿಸಬೇಕು  ಎಂದು ಕೋರಿದರು.

ವಾದ ಆಲಿಸಿದ ಪೀಠ, ಅರ್ಜಿಗೆ ಸಂಬಂಧಿಸಿದಂತೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಪ್ರತಿವಾದಿಗಳನ್ನಾಗಿ ಸೇರಿಸಲು ಅನುಮತಿ ನೀಡಿ ವಿಚಾರಣೆಯನ್ನು ನ.20ಕ್ಕೆ ಮುಂದೂಡಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News