ಕಾಂತರಾಜು ವರದಿ ಅವಧಿಯನ್ನು ಮತ್ತೆ ವಿಸ್ತರಣೆ ಸುವುದು ಬೇಡ: ರಮೇಶ್ ಬಾಬು

Update: 2023-11-23 17:02 GMT

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಸಿದ್ದಪಡಿಸಿರುವ ಎಚ್.ಕಾಂತರಾಜು ಅವರ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯ ಅವಧಿಯನ್ನು ರಾಜ್ಯ ಸರಕಾರ ವಿಸ್ತರಣೆ ಮಾಡುವುದು ಬೇಡ ಎಂದು ಕಾಂಗ್ರೆಸ್ ನಾಯಕ ರಮೇಶ್ ಬಾಬು ಒತ್ತಾಯಿಸಿದ್ದಾರೆ.

ಗುರುವಾರ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಎಚ್. ಕಾಂತರಾಜು ನೇತೃತ್ವದ ಆಯೋಗದ ವರದಿಯನ್ನು ರಾಜ್ಯ ಸರಕಾರ ನಿಗದಿತ ಸಮಯದಲ್ಲಿ ಪಡೆಯದೆ ಇರುವುದು ಅನೇಕ ರಾಜಕೀಯ ಚರ್ಚೆಗಳಿಗೆ ಅವಕಾಶವನ್ನು ಕೊಟ್ಟಿರುತ್ತದೆ. ಸುಪ್ರೀಂ ಕೋರ್ಟಿನ ತೀರ್ಪಿಗೆ ಅನುಗುಣವಾಗಿ ರಾಜ್ಯ ಸರಕಾರ ಈ ವರದಿಯನ್ನು ಪಡೆದು, ಜಾರಿ ಮತ್ತು ವರದಿಯ ಅಂಶಗಳ ಕುರಿತು ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಹಿಂದಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ತನ್ನ ಅವಧಿ ಮುಗಿದ ನಂತರವೂ ಆಯೋಗದ ಅವಧಿಯನ್ನು ವಿಸ್ತರಿಸಿಕೊಳ್ಳಲು ಸಕಾಲದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಿಲ್ಲ ಎಂಬ ಆರೋಪವಿದೆ. ಆಯೋಗಗಳು ಪದೇ ಪದೇ ತಮ್ಮ ಅವಧಿಯ ನಂತರವೂ ವಿಸ್ತರಣೆಗೆ ರಾಜ್ಯ ಸರಕಾರಕ್ಕೆ ಒತ್ತಡ ಹಾಕುವುದು ಸರಿಯಾದ ಕ್ರಮವಲ್ಲ ಎಂದು ಅವರು ತಿಳಿಸಿದ್ದಾರೆ.

ಈಗಿನ ಆಯೋಗದ ಅಧ್ಯಕ್ಷರು ಆಯೋಗದ ಅವಧಿಯನ್ನು ವಿಸ್ತರಿಸುವಂತೆ ಮಾಡಿರುವ ಮನವಿ ಸಮಂಜಸವಲ್ಲ. ಯಾವುದೇ ಆಯೋಗಗಳು ರಾಜ್ಯ ಸರಕಾರದ ಅಡಿಯಲ್ಲಿ ಬಂದರೂ ಅವುಗಳಿಗೆ ವಿಶೇಷವಾದ ಸ್ಥಾನಮಾನ ಮತ್ತು ಅಧಿಕಾರಗಳನ್ನು ನೀಡಲಾಗಿರುತ್ತದೆ. ಆಯೋಗದಲ್ಲಿ ಮೂಲ ವರದಿ ಅಥವಾ ಪ್ರತಿ ನಾಪತ್ತೆ ಆಗಿದ್ದರೆ, ತಪ್ಪಿತಸ್ಥರ ಮೇಲೆ ದೂರು ದಾಖಲಿಸಬೇಕಾಗಿತ್ತು. ಸಾರ್ವಜನಿಕರ ಹಣವನ್ನು ವೆಚ್ಚ ಮಾಡಿ ಸಮೀಕ್ಷೆ ನಡೆಸಿ ಈಗ ಮೂಲ ವರದಿ ನಾಪತ್ತೆಯಾಗಿದೆ ಎಂದರೆ ಅದು ಅನೇಕ ಅನುಮಾನಗಳಿಗೆ ಅವಕಾಶ ನೀಡುತ್ತದೆ. ವರದಿಯ ದತ್ತಾಂಶದ ಜೊತೆಗೆ ಸಮೀಕ್ಷೆಯ ವರದಿ ಅಂತಿಮಗೊಳ್ಳುವ ಮೊದಲು ಅನೇಕ ಸಭೆಯ ನಡವಳಿಕೆಗಳನ್ನು ಮಾಡಲಾಗಿದ್ದು, ಪ್ರತೀ ನಡವಳಿಕೆಯಲ್ಲಿ ಆಯೋಗದ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯದರ್ಶಿ ತಮ್ಮ ಸಹಿ ಮಾಡಿರುತ್ತಾರೆ ಎಂದು ಅವರು ಹೇಳಿದ್ದಾರೆ.

ಆಯೋಗಗಳು ತಮ್ಮ ಜವಾಬ್ದಾರಿಗಳನ್ನು ನಿಗಧಿತ ಅವಧಿಯಲ್ಲಿ ಪರಿಣಾಮಕಾರಿಯಾಗಿ ನಿರ್ವಹಿಸದೇ ಹೋದರೆ ಆಯೋಗಗಳ ಮೂಲ ಉದ್ದೇಶವೇ ವಿಫಲವಾಗುತ್ತದೆ. ಹೀಗಾಗಿ, ಆಯೋಗಗಳ ಅವಧಿಯನ್ನು ಪದೇ ಪದೇ ವಿಸ್ತರಿಸುವ ಮೂಲಕ ಕೆಟ್ಟ ಪರಂಪರೆಗೆ ಅವಕಾಶ ನೀಡಬಾರದೆಂದು ಅವರು ಪತ್ರದ ಮೂಲಕ ಸರಕಾರಕ್ಕೆ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News