ಕಾರ್ಕಳ | ಪರಶುರಾಮ ಥೀಮ್ ಪಾರ್ಕ್ ವಿವಾದ : ಆದೇಶ ಕಾಯ್ದಿರಿಸಿದ ಹೈಕೋರ್ಟ್
ಬೆಂಗಳೂರು: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ವೇಳೆ ಐತಿಹಾಸಿಕ ಪುರುಷನ ಪುತ್ಥಳಿ ನಿರ್ಮಾಣದ ಹೆಸರಿನಲ್ಲಿ ಸಾರ್ವಜನಿಕರ ಹಣ ಲೂಟಿ ಹೊಡೆಯಲಾಗಿದೆ ಎಂದು ಹೈಕೋರ್ಟ್ ತೀವ್ರ ವಾಗ್ದಾಳಿ ನಡೆಸಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಕಾಮಗಾರಿಯಲ್ಲಿ ಅಕ್ರಮ ಎಸಗಿದ್ದಾರೆ' ಎಂದು ಆರೋಪಿಸಿ ಶಿಲ್ಪ ಕಲಾವಿದ ಹಾಗೂ 'ಕ್ರಿಷ್ ಆರ್ಟ್ ವರ್ಲ್ಡ್' ಮುಖ್ಯಸ್ಥ, ಶಿಲ್ಪಿ ಕೃಷ್ಣ ನಾಯಕ್ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಮುಗಿಸಿದ ಹೈಕೋರ್ಟ್, ಈ ಸಂಬಂಧದ ಆದೇಶ ಕಾಯ್ದಿರಿಸಿದೆ.
'ನನ್ನ ವಿರುದ್ಧ ಕಾರ್ಕಳ ನಗರ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಹಾಗೂ ಕಾರ್ಕಳ ಜೆಎಂಎಫ್‌ಸಿ ನ್ಯಾಯಾಲಯದಲ್ಲಿನ ನ್ಯಾಯಿಕ ವಿಚಾರಣೆ ರದ್ದುಪಡಿಸಬೇಕು' ಎಂದು ಕೋರಿ ಬೆಂಗಳೂರಿನ ವಿಶ್ವೇಶ್ವರಯ್ಯ ಲೇಔಟ್ ನಿವಾಸಿಯಾದ ಕೃಷ್ಣ ನಾಯಕ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಪೂರ್ಣಗೊಳಿಸಿತು.
ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠವು, “ಸರಕಾರ ಕಂಚು ಬಳಸಲು ಹೇಳಿದರೆ ನೀವು ಬೇರೆ ಲೋಹ ಬಳಸಿದ್ದೀರಿ ಏಕೆ? ಈ ಕುರಿತು ತನಿಖಾ ವರದಿಯೂ ಇದೆ. ಸಾರ್ವಜನಿಕ ಹಣ ಲೂಟಿ ಮಾಡಲಾಗಿದೆ” ಎಂದು ಅರ್ಜಿದಾರರನ್ನು ತರಾಟೆ ತೆಗೆದುಕೊಂಡಿತು.
ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯ ವಾದ ಪ್ರತಿ-ವಾದ ಆಲಿಸಿ ತೀರ್ಪುನ್ನು ಕಾಯ್ದಿರಿಸಿದೆ.