ಬೇಲಿಕೇರಿ ಅದಿರು ನಾಪತ್ತೆ ಪ್ರಕರಣ: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ 7 ವರ್ಷ ಜೈಲು ಶಿಕ್ಷೆ, 44.64 ಕೋಟಿ ರೂ. ದಂಡ

Update: 2024-10-26 22:05 GMT

ಬೆಂಗಳೂರು : ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಏಳು ಮಂದಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯ, 7 ವರ್ಷ ಕಠಿಣ ಕಾರಾಗೃಹ ಸೇರಿ ಒಟ್ಟಾರೆ 44.64 ಕೋಟಿ ರೂ.ದಂಡ ವಿಧಿಸಿದೆ.

ವಿಶೇಷ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ತೀರ್ಪು ಪ್ರಕಟಿಸಿದರು, ಪ್ರಕರಣದಲ್ಲಿ ಅಂದಿನ ಅರಣ್ಯಾಧಿಕಾರಿ ಮಹೇಶ್ ಜೆ.ಬಿಳಿಯೆ, ಕಾರವಾರ–ಅಂಕೋಲಾ ಕ್ಷೇತ್ರದ ಕಾಂಗ್ರೆಸ್ ಶಾಸಕರೂ ಆದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ.ಲಿಮಿಟೆಡ್ ಕಂಪನಿ ಎಂಡಿ ಸತೀಶ್ ಸೈಲ್, ಲಕ್ಷ್ಮೀ ವೆಂಕಟೇಶ್ವರ ಟ್ರೇಡರ್ಸ್ ಮಾಲಕ ಖಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲಕರರಾದ ಕೆ.ವಿ.ನಾಗರಾಜ್ ಮತ್ತು .ವಿ.ಗೋವಿಂದರಾಜ್, ಆಶಾಪುರ ಮೈನಿಂಗ್ ಕಂಪನಿ ಮಾಲಕ ಚೇತನ್ ಶಾ ಮತ್ತು ಲಾಲ್ ಮಹಲ್ ಕಂಪನಿ ಮಾಲಕ ಪ್ರೇಮ್ ಚಂದ್ ಗರ್ಗ್ ಶಿಕ್ಷೆಗೆ ಗುರಿಯಾಗಿದ್ದಾರೆ.

6 ಪ್ರಕರಣಗಳಲ್ಲಿ ಏಳು ಮಂದಿ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ, ಕಳವು ಪ್ರಕರಣದಲ್ಲಿ ಮೂರು ವರ್ಷಗಳು, ಒಳಸಂಚಿಗೆ ಐದು ವರ್ಷ ಹಾಗೂ ವಂಚನೆ ಅಪರಾಧಕ್ಕೆ ಏಳು ವರ್ಷ ಶಿಕ್ಷೆ ಎಂದು ಹೆಸರಿಸಲಾಗಿದೆ, ಎಲ್ಲ ಶಿಕ್ಷೆಯೂ ಏಕಕಾಲಕ್ಕೆ ಜಾರಿಯಾಗಲು ಗರಿಷ್ಠ 7 ವರ್ಷ ಶಿಕ್ಷೆ ವಿಧಿಸಲಾಗಿದೆ.

ದಂಡ ಎಷ್ಟು?: ಆರು ಪ್ರಕರಣಗಳ ಮೊದಲ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಪರವಾನಗಿಯ ಎಂಡಿ ಸತೀಶ್ ಸೈಲ್ ಅವರನ್ನು ದೋಷಿಗಳೆಂದು ಸೂಚಿಸಿದ್ದ ನ್ಯಾಯಾಲಯ 6 ಕೋಟಿ ರೂ.ದಂಡ ಹಾಕಿದೆ.

ಮತ್ತೊಂದು ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಆಶಾಪುರ ಮಿನೆಚೆಮ್ ಲಿಮಿಟೆಡ್ ಮತ್ತು ಅದರ ಮಾಲಕ ಚೇತನ್ ಶಾ ಮತ್ತು ಮೆಸರ್ಸ್ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿಮಿಟೆಡ್ ಎಂಡಿ ಆಗಿರುವ ಸತೀಶ್ ಸೈಲ್‌ಗೆ 9.60 ಕೋಟಿ, ಮೂರನೇ ಪ್ರಕರಣದಲ್ಲಿ ಇವರಿಗೆ 9.36 ಕೋಟಿ ದಂಡ ವಿಧಿಸಲಾಗಿದೆ.

ಇನ್ನೂ, ನಾಲ್ಕನೆ ಪ್ರಕರಣದಲ್ಲಿ ಮಹೇಶ್ ಜೆ. ಬಿಳಿಯೆ, ಮೆಸರ್ಸ್ ಸ್ವಸ್ತಿಕ್ ಸ್ಟೀಲ್ಸ್ (ಹೊಸಪೇಟೆ) ಪ್ರೈಲಿ ಮತ್ತು ಅದರ ಮಾಲಕರಾದ ಕೆ.ವಿ.ನಾಗರಾಜ್, ಕೆ.ವಿ.ಎನ್ ಗೋವಿಂದರಾಜ್ ಮತ್ತು ಸತೀಶ್ ಸೈಲ್‌ಗೆ 9.54 ಕೋಟಿ, ಐದನೆ ಪ್ರಕರಣದಲ್ಲಿ 9.25 ಕೋಟಿ ಒಟ್ಟು ಆರು ಪ್ರಕರಣಗಳಲ್ಲಿ 44.64 ಕೋಟಿ ದಂಡ ವಿಧಿಸಲಾಗಿದೆ.

ಏನಿದು ಪ್ರಕರಣ?: ಅಕ್ರಮ ಗಣಿಗಾರಿಕೆ ಮೂಲಕ ವಿದೇಶಕ್ಕೆ ಸಾಗಿಸಲು ಕಾರವಾರದ ಬೇಲೆಕೇರಿ ಬಂದರಿಯಲ್ಲಿ 11,312 ಮೆಟ್ರಿಕ್ ಟನ್ ಅದಿರನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆದರೆ, ಅನುಮತಿ ಇಲ್ಲದೇ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಕಾನೂನು ಎಂಡಿ ಆಗಿರುವ ಸತೀಶ್ ಸೈಲ್ ಇದನ್ನು ವಿದೇಶಕ್ಕೆ ಸಾಗಣೆ ಮಾಡಿದ್ದಾರೆ ಎಂಬ ಆರೋಪವಿದೆ.

ಈ ಸಂಬಂಧ ಪ್ರತ್ಯೇಕ 6 ಪ್ರಕರಣಗಳು ದಾಖಲಾಗಿವೆ. ಲೋಕಾಯುಕ್ತ ಮತ್ತು ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಅರಣ್ಯಾಧಿಕಾರಿಗಳು ವಶಪಡಿಸಿಕೊಂಡ 5,00,000 ಮೆಟ್ರಿಕ್ ಟನ್ ಅದಿರಿನ ಮೇಲಕ್ಕೆ 1,29,553.54 ಮೆಟ್ರಿಕ್ ಟನ್ ಅದಿರು ಕಳ್ಳತನವಾಗಿದೆ ಎಂದು ಉಲ್ಲೇಖಿಸಲಾಗಿದೆ. ವಾದ ಪ್ರತಿವಾದ ಆಲಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯ ಶನಿವಾರ ಶಿಕ್ಷೆ ಪ್ರಕಟಿಸಿದೆ.

ಶಾಸಕ ಸ್ಥಾನಕ್ಕೆ ಕುತ್ತು!

ನಿಯಮಗಳ ಪ್ರಕಾರ ಎರಡು ವರ್ಷ ಹೆಚ್ಚಿನ ಜೈಲು ಶಿಕ್ಷೆಯಾದರೆ ಶಾಸಕ ಸ್ಥಾನವನ್ನು ಕಳೆದುಕೊಂಡರು. ಇದೀಗ ಗಂಭೀರ ಪ್ರಕರಣದಲ್ಲಿ ಸತೀಶ್ ಸೈಲ್‌ಗೆ 7 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹೀಗಾಗಿ ಅವರ ಶಾಸಕ ಸ್ಥಾನ ಅನರ್ಹಗೊಳ್ಳಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News