ಡಿಕೆಶಿ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಅಸ್ತು
ಬೆಂಗಳೂರು, ಅ.19: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಸಂಬಂಧ ತಮ್ಮ ವಿರುದ್ಧ ಸಿಬಿಐ ದಾಖಲಿಸಿರುವ ಎಫ್‍ಐಆರ್ ಮತ್ತು ಆ ಕುರಿತ ತನಿಖೆ ರದ್ದುಪಡಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಅಲ್ಲದೆ, ಸಿಬಿಐ ಮೂರು ತಿಂಗಳಲ್ಲಿ ತನ್ನ ತನಿಖೆ ಪೂರ್ಣಗೊಳಿಸಿ, ವಿಚಾರಣಾ ವಿಶೇಷ ಕೋರ್ಟ್‍ಗೆ ದೋಷಾರೋಪ ಪಟ್ಟಿ ಸಲ್ಲಿಸಬೇಕು ಎಂದು ಆದೇಶಿಸಿದೆ.
ಸಿಬಿಐ ತನಿಖೆ ಪ್ರಶ್ನಿಸಿ ಡಿಕೆಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪುನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿತು.
ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ಅವರ ವಾದವನ್ನು ಆಲಿಸಿದ್ದ ನ್ಯಾಯಪೀಠವು ಎಫ್‍ಐಆರ್ ವಜಾ ಮಾಡುವಂತೆ ಕೋರಿ ಡಿ.ಕೆ.ಶಿವಕುಮಾರ್ ಅವರು ತಡವಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೆ, ತನಿಖೆಯನ್ನು ಸಿಬಿಐ ಈಗಾಗಲೇ ಭಾಗಶಃ ಪೂರ್ಣಗೊಳಿಸಿದೆ. ಡಿಕೆಶಿ ಅವರು ತಮ್ಮ ವಿವರಣೆ ಹಾಗೂ ಹೇಳಿಕೆಗಳನ್ನೂ ತನಿಖಾಧಿಕಾರಿಗೆ ಸಲ್ಲಿಸಿದ್ದಾರೆ. ಇದನ್ನು ತನಿಖಾಧಿಕಾರಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನ್ಯಾಯಾಲಯ ತನಿಖೆ ರದ್ದುಪಡಿಸಲು ಆಗದು ಎಂದು ಆದೇಶದಲ್ಲಿ ತಿಳಿಸಿದೆ.
ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದರೆ, ಅದನ್ನು ರದ್ದುಪಡಿಸಲು ಅಥವಾ ತಮ್ಮ ಮೇಲಿನ ಆರೋಪಗಳನ್ನು ಕೈ ಬಿಡುವಂತೆ ಕೋರಲು ಡಿ.ಕೆ.ಶಿವಕುಮಾರ್ ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಪೀಠವು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಅವರ ಅರ್ಜಿಯನ್ನು ವಜಾ ಮಾಡಲಾಗಿದೆ. ಸಿಬಿಐ ತನಿಖೆಗೆ ತಡೆ ನೀಡಿದ್ದ ಮಧ್ಯಂತರ ಆದೇಶವನ್ನು ತೆರವು ಮಾಡಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.
ಡಿಕೆಶಿ ಪರ ವಾದಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರು, ಡಿಕೆಶಿ ವಿರುದ್ಧ ಅಷ್ಟೇ ಅಲ್ಲದೇ ಅವರ ಕುಟುಂಬದ ಸದಸ್ಯರ ಮೇಲೂ ಆರೋಪವನ್ನು ಮಾಡಲಾಗಿದೆ. ಕುಟುಂಬದ ಸದಸ್ಯರು ಗಳಿಸಿರುವ ಆದಾಯವನ್ನೂ ಡಿಕೆಶಿ ಅವರ ವೈಯಕ್ತಿಕ ಆದಾಯ ಎಂದು ತನಿಖಾಧಿಕಾರಿಗಳು ಪರಿಗಣನೆ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಅರ್ಜಿದಾರರು ನಿಗದಿಗಿಂತ ಹೆಚ್ಚಿನ ಆದಾಯ ಸಂಪಾದಿಸಿದ್ದಾರೆ ಎಂಬುದಾಗಿ ಹೇಳುತ್ತಿದ್ದಾರೆ. ಕುಟುಂಬ ಸದಸ್ಯರ ಆದಾಯವನ್ನು ಪರಿಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ, ಸಿಬಿಐ ತನಿಖಾ ವಿಧಾನವೇ ಪ್ರಶ್ನಾರ್ಹವಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು.
ಅಲ್ಲದೇ, ರಾಜಕೀಯ ಎದುರಾಳಿಯನ್ನು ಹಲವು ರೀತಿಯ ಮೊಕದ್ದಮೆಯಲ್ಲಿ ಸಿಲುಕಿಸುವುದು ರಾಜಕೀಯ ದುರುದ್ದೇಶವೇ ಅಗಿದೆ. ಹೀಗಾಗಿ, ಇಲ್ಲಿ ಯಾರನ್ನೂ ಪ್ರತಿವಾದಿ ಮಾಡುವ ಅಗತ್ಯವಿಲ್ಲ. ಡಿಕೆಶಿ ಅವರ ಬಳಿ ಆದಾಯ ಮೀರಿ ಆಸ್ತಿ ಪತ್ತೆಯಾಗಿದೆ ಎಂದು ಈ.ಡಿ., ಆದಾಯ ತೆರಿಗೆ ಇಲಾಖೆ ವಿಚಾರಣೆ, ಈಗ ಸಿಬಿಐ ತನಿಖೆ ನಡೆಸಲಾಗುತ್ತಿದೆ. ಈ ಅರ್ಥದಲ್ಲಿ ನಾವು ಇದನ್ನು ರಾಜಕೀಯ ದುರುದ್ದೇಶ ಎಂದು ಹೇಳಿದ್ದೇವೆ ಎಂದು ಪೀಠಕ್ಕೆ ಹೇಳಿದ್ದರು.
ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್ ಅವರು, ತನಿಖಾ ಸಂಸ್ಥೆಯು 596 ದಾಖಲೆಗಳನ್ನು ಸಂಗ್ರಹಿಸಿದೆ. 84 ಸಾಕ್ಷಿಗಳನ್ನು ಪರಿಶೀಲಿಸಲಾಗಿದೆ. ಇಲ್ಲಿ ಯಾವುದೇ ರೀತಿಯಲ್ಲೂ ತನಿಖೆ ವಿಳಂಬವಾಗಿಲ್ಲ. 2020ರ ಅ.3ಕ್ಕೆ ಎಫ್‍ಐಆರ್ ದಾಖಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಸಾಧ್ಯವಿಲ್ಲ ಎಂದು ತಿಳಿದು ಡಿಕೆಶಿ ಅವರು ಎಫ್‍ಐಆರ್ ವಜಾ ಕೋರಿ 2022ರ ಜು.28ರಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಪೀಠಕ್ಕೆ ತಿಳಿಸಿದ್ದರು.
ಪೊಲೀಸ್ ವರಿಷ್ಠಾಧಿಕಾರಿಯು ಪ್ರಕರಣದ ತನಿಖೆ ನಡೆಸಲು ಅನುಮತಿಸಬೇಕು. ಅದೇ ರೀತಿ ಸಿಬಿಐ ಪೊಲೀಸ್ ವರಿಷ್ಠಾಧಿಕಾಯು ಡಿವೈಎಸ್‍ಪಿ ಅವರಿಗೆ ತನಿಖೆ ನಡೆಸಲು ಅನುಮತಿಸಿದ್ದಾರೆ. ಹೀಗಾಗಿ, ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಪೀಠದ ಗಮನಕ್ಕೆ ತಂದಿದ್ದರು.