ಕರ್ನಾಟಕ-ತಮಿಳುನಾಡು ‘ಜಲವಿವಾದ': ಮಾತುಕತೆ ಮೂಲಕ ಪರಿಹಾರಕ್ಕೆ ಕೇಂದ್ರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಒತ್ತಾಯ

Update: 2023-06-30 18:50 GMT

ಹೊಸದಿಲ್ಲಿ, ಜೂ. 30: ‘ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವಿನ ಜಲ ವಿವಾದಗಳ ಕುರಿತು ನ್ಯಾಯಾಧಿಕರಣ ರಚನೆ ಮಾಡುವುದಕ್ಕಿಂತ ಉಭಯ ರಾಜ್ಯಗಳ ಮಧ್ಯೆ ಪರಸ್ಪರ ಮಾತುಕತೆ ಮೂಲಕವೇ ನ್ಯಾಯಯುತ ಪರಿಹಾರಕ್ಕೆ ಮುಂದಾಗಬೇಕು’ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ಶುಕ್ರವಾರ ದಿಲ್ಲಿಯ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ದಕ್ಷಿಣ ಪೆನ್ನಾರ್ ಜಲಾನಯನ ನೀರು ಶುದ್ಧೀಕರಣ ಯೋಜನೆ ತಮಿಳುನಾಡು ರಾಜ್ಯ ಸಲ್ಲಿಸಿರುವ ದೂರಿನಲ್ಲಿ ಸ್ಪಷ್ಟತೆ ಇಲ್ಲ ಮತ್ತು ತೀರ್ಪು ಅಗತ್ಯವಿರುವ ಯಾವುದೇ ನಿರ್ದಿಷ್ಟ ಜಲವಿವಾದಗಳನ್ನು ಬಹಿರಂಗಪಡಿಸಲು ವಿಫಲವಾಗಿದೆ’ ಎಂದು ಹೇಳಿದರು.

‘ಮಾಕರ್ಂಡೇಯ ನದಿ ಯೋಜನೆಯ ಜಲಾಶಯ, ವಿವಿಧ ಟ್ಯಾಂಕ್‍ಗಳಿಂದ ಹೆಚ್ಚುವರಿ ನೀರಿನ ಬಳಕೆ ಮತ್ತು ಪೆನ್ನಯಾರ್ ನದಿಯಿಂದ ಪಂಪ್ ಮಾಡುವ ಯೋಜನೆಗಳು ಸೇರಿದಂತೆ ತಮಿಳುನಾಡು ಪ್ರಸ್ತಾಪಿಸಿದ ಯೋಜನೆಗಳನ್ನು ಉಲ್ಲೇಖಿಸಿದರು. ಕರ್ನಾಟಕದ ಕುಡಿಯುವ ನೀರಿನ ಯೋಜನೆಗಳು ಕಾನೂನಿನ ಪ್ರಕಾರ ಹೆಚ್ಚಿನ ಆದ್ಯತೆಯನ್ನು ಹೊಂದಿವೆ ಮತ್ತು ಯಾವುದೆ ಒಪ್ಪಂದಗಳಿಗೆ ಒಳಪಡುವುದಿಲ್ಲ’ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

‘ನದಿ ತೀರದ ರಾಜ್ಯಗಳ ಮೂಲಕ ಹಾದು ಹೋಗುವ ಅಂತರರಾಜ್ಯ ನದಿಯ ನೀರು ರಾಷ್ಟ್ರೀಯ ಆಸ್ತಿಯಾಗಿದೆ ಮತ್ತು ಯಾವುದೆ ರಾಜ್ಯವು ವಿಶೇಷ ಮಾಲಕತ್ವವನ್ನು ಪಡೆಯಲು ಅಥವಾ ಇತರ ರಾಜ್ಯಗಳ ಸಮಾನ ಪಾಲನ್ನು ಕಸಿದುಕೊಳ್ಳುವ ವಿಧಿಬದ್ಧ ಹಕ್ಕನ್ನು ಪ್ರತಿಪಾದಿಸಲು ಸಾಧ್ಯವಿಲ್ಲ ಎಂದು ಶಿವಕುಮಾರ್ ವಿವರಿಸಿದರು.

ಕೇಂದ್ರ ಜಲಶಕ್ತಿ ಸಚಿವಾಲಯದ ಶಿಫಾರಸ್ಸಿನ ಮೇರೆಗೆ ಕ್ರಮ ಕೈಗೊಳ್ಳಬೇಡಿ ಮತ್ತು ತರಾತುರಿಯಲ್ಲಿ ನ್ಯಾಯ ಮಂಡಳಿಯನ್ನು ರಚಿಸಬೇಡಿ ಎಂದು ಮನವಿ ಮಾಡಿದ ಅವರು, ಹೊಸದಾಗಿ ಮಾತುಕತೆ ಪ್ರಾರಂಭಿಸಲು ಮತ್ತು ತಮಿಳುನಾಡು ಎತ್ತಿರುವ ಜಲ ವಿವಾದಗಳನ್ನು ಇತ್ಯರ್ಥಗೊಳಿಸಲು 12 ವಾರಗಳ ಕಾಲಾವಕಾಶವನ್ನು ಕೋರಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸುವಂತೆ ಕೇಂದ್ರ ಸಚಿವಾಲಯವನ್ನು ಆಗ್ರಹಿಸಲಾಗಿದೆ ಎಂದು ಹೇಳಿದರು.

ಕೇಂದ್ರ ಜಲಸಂಪನ್ಮೂಲ ಸಚಿವಾಲಯದಿಂದ ಅನುಮತಿ ಮತ್ತು ಬೆಂಬಲದ ಅಗತ್ಯವಿರುವ ಮೇಕೆದಾಟು ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಕೇಂದ್ರದ ನೆರವು 5,300 ಕೋಟಿ ರೂ. ಘೋಷಿಸಿದ್ದಕ್ಕಾಗಿ ನಾನು ನನ್ನ ಕೃತಜ್ಞತೆಯನ್ನು ಸಲ್ಲಿಸಿದೆ. ಅಲ್ಲದೆ, ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿ-2ರ ಗೆಜೆಟ್ ಅಧಿಸೂಚನೆ, ಕಳಸಾ ಮತ್ತು ಬಂಡೂರ ನಾಲಾ ತಿರುವು ಯೋಜನೆಗೆ (ಮಹದಾಯಿ) ಅನುಮತಿ ಮತ್ತು ನದಿ ಯೋಜನೆಗಳ ಅಂತರ-ಸಂಪರ್ಕದಲ್ಲಿ ಕರ್ನಾಟಕದ ಹಕ್ಕಿನ ಪಾಲು ಸೇರಿವೆ ಎಂದು ಹೇಳಿದರು.

ಕರ್ನಾಟಕ ಸರಕಾರವು ಮಾತುಕತೆಗಳ ಮೂಲಕ ಜಲ ವಿವಾದಗಳಿಗೆ ನ್ಯಾಯಯುತ ಪರಿಹಾರವನ್ನು ಬಯಸುತ್ತದೆ ಮತ್ತು ರಾಜ್ಯದ ಅಭಿವೃದ್ಧಿ ಮತ್ತು ಅದರ ರೈತರ ಕಲ್ಯಾಣಕ್ಕಾಗಿ ನಿರ್ಣಾಯಕ ಯೋಜನೆಗಳನ್ನು ಬೆಂಬಲಿಸಲು ಮತ್ತು ತ್ವರಿತಗೊಳಿಸಲು ಕೇಂದ್ರ ಜಲಸಂಪನ್ಮೂಲ ಸಚಿವಾಲಯವನ್ನು ಮನವಿ ಮಾಡಲಾಗಿದೆ ಎಂದು ಶಿವಕುಮಾರ್ ಹೇಳಿದರು.

‘ಮೇಕೆದಾಟು ಯೋಜನೆಗೆ ಮಂಜೂರಾತಿಯನ್ನು ತ್ವರಿತಗೊಳಿಸಬೇಕು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು. ಕೃಷ್ಣಾ ಜಲವಿವಾದ ನ್ಯಾಯಮಂಡಳಿ ನೀಡಿರುವ ತೀರ್ಪನ್ನು ಪ್ರಕಟಿಸಬೇಕು. ಕಳಸಾ-ಬಂಡೂರ ನಾಲಾ ತಿರುವು ಯೋಜನೆಗೆ ಅನುಮತಿ ನೀಡಬೇಕು’

-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News