ಚಳಿಗಾಲದ ಅಧಿವೇಶನ ಅಂತ್ಯ: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ವಿಫಲ

Update: 2023-12-16 07:20 GMT

ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನ ಮುಕ್ತಾಯಗೊಂಡಿದ್ದು, ಹಲವು ವಿಧೇಯಕಗಳಿಗೆ ಅಂಗೀಕಾರ ನೀಡಲಾಗಿದೆ. ಆದರೆ, ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂದು ಬಿಜೆಪಿ ಹಾಗೂ ಜೆಡಿಎಸ್‌ ಹಾಕಿಕೊಂಡಿದ್ದ ಯೋಜನೆಗಳೆಲ್ಲಾ ವಿಫಲವಾಗಿದೆ.

ಹೊಸದಾಗಿ ವಿಪಕ್ಷ ನಾಯಕ ಸ್ಥಾನ ಅಲಂಕರಿಸಿಕೊಂಡಿದ್ದ ಆರ್‌ ಅಶೋಕ್‌ ಅವರು ಅಧಿವೇಶನಕ್ಕೂ ಮುನ್ನ, ʼಸರ್ಕಾರಕ್ಕೆ ಛಾಟಿ ಏಟು ಕೊಡುತ್ತೇವೆʼ, ʼಚಳಿಜ್ವರ ಬಿಡಿಸುತ್ತೇವೆʼ ಎಂದೆಲ್ಲಾ ಹೇಳಿಕೊಂಡಿದ್ದರಾದರೂ ವಿಪಕ್ಷ ನಾಯಕನಾಗಿ ಸರ್ಕಾರವನ್ನು ಪೇಚಿಗೆ ಸಿಲುಕಿಸುವ ಬದಲು ಸ್ವಪಕ್ಷದ ಭಿನ್ನಮತವನ್ನು ನಿಯಂತ್ರಣಕ್ಕೆ ತರುವಲ್ಲಿಯೇ ಹೈರಾಣಾಗಿದ್ದಾರೆ.

ಅಧಿವೇಶನಕ್ಕೂ ಮುನ್ನ ಸರ್ಕಾರದ ವಿರುದ್ಧ ಪೆನ್‌ಡ್ರೈವ್‌ ಪುರಾವೆ ಸೇರಿದಂತೆ ಹಲವಾರು ಆರೋಪಗಳನ್ನು ಮಾಡಿದ್ದ ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಅವರು ಕೂಡಾ ನಿರೀಕ್ಷಿತ ಮಟ್ಟದಲ್ಲಿ ಸದನದಲ್ಲಿ ಸದ್ದು ಮಾಡಿಲ್ಲ.

ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರ ಸಂಬಂಧಿಸಿದಂತೆ ಸದನದಲ್ಲಿ ಪ್ರಸ್ತಾಪಿಸಲು ಜೆಡಿಎಸ್‌ ಹಾಗೂ ಬಿಜೆಪಿ ಒಂದಾಗುತ್ತಿದ್ದಂತೆ ಅವನ್ನು ಎದುರಿಸಲು ಸಕಲ ಸಜ್ಜಾಗಿದ್ದ ಸಿದ್ದರಾಮಯ್ಯ ಸರ್ಕಾರ ಉತ್ತರ ಕರ್ನಾಟಕಕ್ಕೆ ಹಲವಾರು ಘೋಷಣೆ ಮೂಲಕ ವಿಪಕ್ಷಗಳ ಯೋಜನೆಯನ್ನು ತಲೆ ಕೆಳಗೆ ಮಾಡಿದೆ.

ಸದನದಲ್ಲಿ ಸರ್ಕಾರದ ಲೋಪದೋಷ ಎತ್ತಿ ಹಿಡಿಯುವ ಬದಲು ತಮ್ಮ ಪಕ್ಷದ ನಾಯಕತ್ವ, ಆಂತರಿಕ‌‌ ಗೊಂದಲ, ಹೊಂದಾಣಿಕೆ‌ ಕೊರತೆ, ಪ್ರಬುದ್ದತೆ ಪ್ರದರ್ಶನದಲ್ಲಿ ಬಿಜೆಪಿ ಎಡವಿದ್ದು, ವಿಪಕ್ಷ ನಾಯಕ ಆರ್‌ ಅಶೋಕ್‌ ಬಗ್ಗೆ ಸ್ವಪಕ್ಷ ನಾಯಕರಲ್ಲಿ ಇರುವ ಅಸಮಾಧಾನವೇ ಬಿಜೆಪಿಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.

ವರ್ಗಾವಣೆ ದಂಧೆ, ಗ್ಯಾರಂಟಿ ಗೊಂದಲ, ಯತೀಂದ್ರ ಪ್ರಕರಣ, ಚೆಲುವರಾಯಸ್ವಾಮಿ ಕೆರೆ ಒತ್ತುವರಿ ಪ್ರಕರಣ, ಬರ ಪರಿಹಾರ ವಿಚಾರಗಳ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿ ಸರ್ಕಾರವನ್ನು ಪೇಚಿಗೆ ಸಿಲುಕಿಸುವ ಅವಕಾಶ ವಿಪಕ್ಷಗಳಿಗೆ ದಟ್ಟವಾಗಿ ಇತ್ತಾದರೂ, ಸರ್ಕಾರದ ವಿರುದ್ಧ ಹೋರಾಟ ಮಾಡುವ ಬದಲು ಸ್ವಪಕ್ಷದ‌ ಗೊಂದಲ‌ ಬಗೆಹರಿಸುವುದೇ ಬಿಜೆಪಿಗೆ ದೊಡ್ಡ ಸವಾಲಾಗಿ ಮಾರ್ಪಟ್ಟಿತ್ತು.

ಅಧಿವೇಶನದಲ್ಲಿ ಬಿಜೆಪಿಯ ಪ್ರಶ್ನೆಗಳಿಗಿಂತ ಬಿಜೆಪಿಯ ಆಂತರಿಕ ಕಚ್ಚಾಟ ಬಹಿರಂಗವಾದದ್ದೇ ದೊಡ್ಡ ಸುದ್ದಿಯಾಗಿತ್ತು.

ಇನ್ನು, ಹೆಚ್‌ ಡಿ ಕುಮಾರಸ್ವಾಮಿ ಅವರು ಕೂಡಾ ಸದನದಲ್ಲಿ ಮೌನವಾದ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಭ್ರಷ್ಟಾಚಾರದ ಬಗ್ಗೆ ಧ್ವನಿ, ರೈತರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುತ್ತೇನೆಂದು ಅಬ್ಬರಿಸಿದ್ದ ಹೆಚ್‌ ಡಿ ಕುಮಾರಸ್ವಾಮಿ ಅವರು ನಾಲ್ಕೈದು ದಿನ ಕಲಾಪಕ್ಕೆ ಆಗಮಿಸಿದರಾದರೂ ಮೌನಕ್ಕೆ ಶರಣಾಗಿ ಅಚ್ಚರಿ ಹುಟ್ಟಿಸಿದ್ದಾರೆ.

ಡಿಕೆಶಿ ಸಿಬಿಐ ಪ್ರಕರಣ ವಾಪಸ್, ಝಮೀರ್ ಅಹಮದ್‌ ಖಾನ್ ವಿಚಾರ, ಗ್ಯಾರಂಟಿ ಜಾರಿ ವೈಫಲ್ಯ, ಅನ್ನಭಾಗ್ಯ ಅಕ್ಕಿ ನೀಡದ‌ ವಿಚಾರ, ಗೃಹ ಲಕ್ಷ್ಮೀ ಜಾರಿಗೆ ತಾಂತ್ರಿಕ ಸಮಸ್ಯೆ, ಖಾಲಿ‌ಹುದ್ದೆಗಳ ಭರ್ತಿ ವಿಳಂಬ, ನೀರಾವರಿ ಯೋಜನೆಗಳು, ಸಚಿವರ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಹಳಿ ತಪ್ಪಿದ ಸಂಬಂಧ ಸೇರಿದಂತೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಹಲವು ಪ್ರಮುಖ‌ ವಿಷಯಗಳು ಇತ್ತಾದರೂ, ಸದನವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಪಕ್ಷಗಳು ವಿಫಲವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News